ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ತಾಯಿ, ಶಿಶು ಮರಣದ ಪ್ರಮಾಣ ಶೂನ್ಯಕ್ಕಿಳಿಸಿ

3

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ 2024ರ ಏಪ್ರಿಲ್ ನಿಂದ ನವೆಂಬರ್ ವರೆಗೆ 16 ತಾಯಿ ಮರಣ ಹಾಗೂ 196 ಶಿಶು ಮರಣ ಸಂಭವಿಸಿದ್ದು, ತಾಯಿ ಮತ್ತು ಶಿಶು ಮರಣದ ಪ್ರಮಾಣವನ್ನು ಶೂನ್ಯಕ್ಕಿಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 2024ರ ಏಪ್ರಿಲ್ ನಿಂದ ನವೆಂಬರ್ ವರೆಗೆ 19,583 ಹೆರಿಗೆ ಪ್ರಕರಣ ವರದಿಯಾಗಿದ್ದು, ಈ ಪೈಕಿ 16 ತಾಯಿ ಮರಣ ಹಾಗೂ 196 ಶಿಶು ಮರಣ ಸಂಭವಿಸಿವೆ, ತಾಯಿ ಮತ್ತು ಶಿಶು ಮರಣಗಳ ಪ್ರಮಾಣವನ್ನು ಶೂನ್ಯಕ್ಕೆ ತರುವಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರಲ್ಲದೆ, ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉದಾಸೀನ ಮಾಡದೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು, ತಾಯಿ ಮತ್ತು ಶಿಶು ಮರಣ ಸಂಭವಿಸಿದ ನಂತರ ಮರಣ ಪ್ರಮಾಣದ ಬಗ್ಗೆ ಚರ್ಚಿಸುವ ಬದಲು ಮರಣ ಪ್ರಮಾಣ ಶೂನ್ಯಕ್ಕೆ ತರುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಬೇಕೆಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಮರಣ ಹೊಂದಿದ 16 ತಾಯಂದಿರ ಪೈಕಿ ಮನೆಯಲ್ಲಿ 1, ಖಾಸಗಿ ಆಸ್ಪತ್ರೆಯಲ್ಲಿ 8, ಸರ್ಕಾರಿ ಆಸ್ಪತ್ರೆಯಲ್ಲಿ 3 ಹಾಗೂ ಮಾರ್ಗ ಮಧ್ಯೆ 4 ಪ್ರಕರಣಗಳು ವರದಿಯಾಗಿವೆ, ಅದೇ ರೀತಿ ಆಸ್ಪತ್ರೆಯಲ್ಲಿ 127 ಹಾಗೂ ಮನೆಯಲ್ಲಿ 69 ಸೇರಿ ಒಟ್ಟು 196 ಶಿಶುಗಳ ಮರಣ ಸಂಭವಿಸಿರುವ ಬಗ್ಗೆ ವರದಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಸ್ಗರ್ ಬೇಗ್ ಸಭೆಗೆ ಮಾಹಿತಿ ನೀಡುತ್ತಾ, ಕಳೆದ ಏಪ್ರಿಲ್ ಮಾಹೆಯಿಂದ ನವೆಂಬರ್ ವರೆಗೆ ಹೃದಯ ಸಂಬಂಧಿತ, ಅಧಿಕ ರಕ್ತದೊತ್ತಡ, ಅಧಿಕ ರಕ್ತಸ್ರಾವ, ಉಸಿರಾಟದ ತೊಂದರೆ, ಅವಧಿ ಪೂರ್ವ ಹೆರಿಗೆ, ಡಯೇರಿಯಾ, ಆಸ್ಫಿಕ್ಸಿಯಾ, ಕಡಿಮೆ ತೂಕದ ಜನನ, ನಿಮೋನಿಯಾ, ಸೆಪ್ಸಿಸ್ ಸೇರಿದಂತೆ ಮತ್ತಿತರ ರೋಗಗಳಿಂದ ತಾಯಿ ಮತ್ತು ಶಿಶು ಮರಣ ಸಂಭವಿಸಿವೆ, ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ವೈದ್ಯಕೀಯ ಮಹಾ ವಿದ್ಯಾಲಯದ ವೈದ್ಯಾಧಿಕಾರಿಗಳು ಹಾಗೂ ಸ್ತ್ರೀರೋಗ ತಜ್ಞರು, ಆರ್ ಸಿ ಹೆಚ್ ಅಧಿಕಾರಿ ಡಾ.ಸಿ.ಆರ್. ಮೋಹನ್, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಖಾ, ಡಾ.ಮೋಹನ್ ದಾಸ್, ಡಾ.ಕೇಶವ್ ರಾಜ್, ವಿವಿಧ ತಾಲ್ಲೂಕುಗಳ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!