ಕುಣಿಗಲ್: ಸಂತೇಮೈದಾನ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಕಾಂಗ್ರೆಸ್- ಬಿಜೆಪಿ ಪಕ್ಷದ ಮುಖಂಡರ ನಡುವೆ ವಾಗ್ವಾದ ನಡೆದು ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾದ ಘಟನೆ ಮಂಗಳವಾರ ನಡೆಯಿತು.
ಪಟ್ಟಣ ದಕೋಟೆ ಪ್ರದೇಶದ ಸಂತೇ ಮೈದಾನದ ರಸ್ತೆ ವ್ಯಾಪಕ ಒತ್ತುವರಿ ಆಗಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಬದಿ ಚರಂಡಿ ಹಾಗೂ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ 38 ಲಕ್ಷ ರೂ.ವೆಚ್ಚದಲ್ಲಿ ಪುರಸಭೆ ಅಧಿಕಾರಿಗಳು ಚಾಲನೆ ನೀಡಿದರು, ಕಾಮಗಾರಿ ಆರಂಭದ ವೇಳೆಯಲ್ಲೆ ರಸ್ತೆ ಇಕ್ಕೆಲಗಳ ಮಾಲೀಕರು ತಗಾದೆ ತೆಗೆದಿದ್ದು ಕೆಲ ಮುಖಂಡರ ಮಧ್ಯ ಪ್ರವೇಶದಿಂದ ಚರಂಡಿ ಮೇಲಿನ ಒತ್ತುವರಿ ತೆರವುಗೊಳಿಸಿ ಕಾಮಗಾರಿ ಆರಂಭವಾಗಿತ್ತು, ರಸ್ತೆಯ ಒಂದು ಕೊನೆಯಲ್ಲಿದ್ದ ಮಳಿಗೆ ಮಾಲೀಕರ ತಮ್ಮ ಕಟ್ಟಡಕ್ಕೆ ಹೊಂದಿಕೊಂಡಂತೆ ಮಳಿಗೆಯ ವಿದ್ಯುತ್ ಪರಿವರ್ತಕದ ಕಟ್ಟೆ ಚರಂಡಿಯ ಸ್ವಲ್ಪ ಭಾಗಕ್ಕೆ ಸೇರಿದ್ದು ಎಂದು ಆರೋಪಿಸಲಾಗಿದೆ.
ಮಂಗಳವಾರ ಕಾಮಗಾರಿ ಆರಂಭದ ವೇಳೆಯಲ್ಲಿ ಪರಿವರ್ತಕ ಸ್ಥಳಾಂತರಿಸುವ ಕಾರ್ಯ ಹಿನ್ನಡೆಯಾಗಿದ್ದು ಪುರಸಭೆ ಮಾಜಿ ಸದಸ್ಯ ಚಂದ್ರಶೇಖರ, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಇತರರು ಚರಂಡಿ ಕಾಮಗಾರಿ ಅನುವಾಗುವ ದಿಸೆಯಲ್ಲಿ ಟಿಸಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಮಾಲೀಕರೊಂದಿಗೆ ಚರ್ಚೆ ನಡೆಸುತ್ತಿದ್ದರು, ಪುರಸಭೆ ಸದಸ್ಯ ಉದಯ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಕಟ್ಟಡ ಅಳೆಯುವ ವಿಷಯದಲ್ಲಿ ವಾದ ವಿವಾದ ಆರಂಭವಾಯಿತು, ಸ್ಥಳಕ್ಕೆ ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್ ಆಗಮಿಸಿ ಕಾಮಗಾರಿ ಆರಂಭದ ಮುನ್ನ ನೋಟಿಸ್ ನೀಡುವಂತೆ ಅಭಿಯಂತರರನ್ನು ಪ್ರಶ್ನಿಸಿದಾಗ, ಅಭಿಯಂತರ ಬಿಂದುಸಾರ ಪುರಸಭೆ ಜಾಗಕ್ಕೆ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಜಾಗದ ವಿಷಯ ತೀರ್ಮಾನಿಸುವ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷರಿಗೂ, ಯುವ ಕಾಂಗ್ರೆಸ್ ಅಧ್ಯಕ್ಷರಿಗೂ ವಾಗ್ವಾದ ನಡೆದು ಕಾವೇರಿದ ಚರ್ಚೆಗೆ ಕಾರಣವಾಗಿ ತಳ್ಳಾಟ ನೂಕಾಟಕ್ಕೂ ಕಾರಣವಾಯಿತು, ಸಮಸ್ಯೆ ಬಗರೆಹರಿಸಬೇಕಾದ ಪುರಸಭೆ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿ ನಿಂತರು.
ಎರಡೂ ಪಕ್ಷದ ಮುಖಂಡರ ನಡುವಿನ ವಾಗ್ವಾದದಿಂದ ರಸ್ತೆಯಲ್ಲಿ ಜನಸಂದಣಿ ಸೇರಿ ಗೊಂದಲದ ವಾತವರಣ ನಿರ್ಮಾಣವಾಯಿತು, ಸಿಪಿಐ ನವೀನ್ಗೌಡ ಸಿಬ್ಬಂದಿ ಸ್ಥಳಕ್ಕಾಗಮಿಸಿ ಗುಂಪು ಚದುರಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು, ಮಳಿಗೆ ಮಾಲೀಕರೊಂದಿಗೆ ಚರ್ಚಿಸಿದರು, ಮಳಿಗೆ ಮಾಲೀಕರು ಟಿಸಿ ಸ್ಥಳಾಂತರಿಸಲು ಮುಂದಾದದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಗೊಂಡಿತು.
ಹಿರಿಯ ನಾಗರಿಕ ಕೃಷ್ಣಪ್ಪ ಮಾತನಾಡಿ, ಎಲ್ಲಾ ಸಮಸ್ಯೆಗೆ ಮೂಲ ಕಾರಣವೇ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ, ಪುರಸಭೆಯ ಚರಂಡಿ, ರಸ್ತೆ ಒತ್ತುವರಿಯಾಗುತ್ತಿದೆ ಎಂದು ಹಲವಾರು ಬಾರಿ ದೂರು ನೀಡಿದರೂ ಅಧಿಕಾರಿಗಳು ಒತ್ತುವರಿ ತೆರವುಗೊಳಿಸುವುದಿಲ್ಲ, ನಿರ್ಮಾಣ ಹಂತದಲ್ಲೆ ಒತ್ತುವರಿ ತೆರವುಗೊಳಿಸಿದರೆ ಯಾವುದೆ ಸಮಸ್ಯೆ ಉದ್ಭವಿಸುವುದಿಲ್ಲ, ಇನ್ನಾದರೂ ಪುರಸಭೆ ಚರಂಡಿ, ರಸ್ತೆ ಒತ್ತುವರಿ ಅಗದಂತೆ ಕ್ರಮ ವಹಿಸಿ ಭವಿಷ್ಯದಲ್ಲಿ ಯಾವುದೇ ಗೊಂದಲಕಾರಿ ಪರಿಸ್ಥಿತಿ ಉಂಟಾಗದಂತೆ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.
Comments are closed.