ತುಮಕೂರು: ಧನುರ್ಮಾಸ ಆರಂಭವಾಯಿತ್ತೆಂದರೆ ಮೈನಡುಗಿಸುವ ಚಳಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಧನುರ್ಮಾಸ ಆರಂಭದ 2ನೇ ದಿನವಾದ ಬೆಳಗ್ಗೆಯೇ ಕಲ್ಪತರುನಾಡಲ್ಲಿ ದಟ್ಟ ಮಂಜು ಆವರಿಸಿದ್ದು, ವಾಹನ ಸವಾರರು ಸುಗಮವಾಗಿ ಸಂಚರಿಸಲು ಪರದಾಡುವಂತಾಯಿತು.
ಕಳೆದ ಎರಡು- ಮೂರು ದಿನಗಳಿಂದ ಥಂಡಿ, ಚಳಿ ದುಪ್ಪಟವಾಗಿದ್ದು, ಸೂರ್ಯನ ರಶ್ಮಿ ಭೂಮಿಗೆ ತಾಗದಷ್ಟರ ಮಟ್ಟಿಗೆ ಬೆಳಗ್ಗೆ 6 ಗಂಟೆಯಿಂದಲೇ ದಟ್ಟ ಮಂಜು ಆವರಿಸಿತ್ತು.
ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ಕಪಕ್ಕದ ಮನೆಗಳು ಕಾಣದಷ್ಟರ ಮಟ್ಟಿಗೆ ಮಂಜು ದಟ್ಟವಾಗಿ ಆವೃತವಾಗಿತ್ತು.
ಇನ್ನು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ದಟ್ಟ ಮಂಜು ಆವರಿಸಿದ್ದರಿಂದ ಬೆಳಗ್ಗೆ 8.45 ಗಂಟೆಯಾದರೂ ರಸ್ತೆಯಲ್ಲಿ ಎದುರಿಗೆ ಬರುವ ವಾಹನಗಳು ಚಾಲಕರಿಗೆ ಕಾಣದಂತಾಗಿತ್ತು, ಇದರಿಂದಾಗಿ ವಾಹನಗಳ ಸುಗಮವಾಗಿ ಚಲಿಸಲಾಗದೆ ಚಾಲಕರು ಪರದಾಡುವಂತಾಗಿತ್ತು, ಬಸ್, ಲಾರಿ, ಕಾರುಗಳು ಹೆಡ್ ಲೈಟ್ ಹಾಕಿಕೊಂಡು ಚಲಿಸಿದರೂ ಸಹ ರಸ್ತೆಯಲ್ಲಿ ಬೆಳಕು ಕಾಣದಂತಾಗಿತ್ತು.
ಕೆಎಸ್ಸಾರ್ಟಿಸಿ ಬಸ್, ಖಾಸಗಿ ಬಸ್ ಚಾಲಕರನ್ನು ಹೊರತುಪಡಿಸಿದರೆ ಸರಕು ಸಾಗಣೆ, ಲಾರಿ ಚಾಲಕರುಗಳು ಮೈನಡುಗಿಸುವ ಚಳಿ, ದಟ್ಟ ಮಂಜಿನಿಂದಾಗಿ ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಟೀ ಅಂಗಡಿಗಳ ಬಳಿ ಬೆಂಕಿ ಹಾಕಿಕೊಂಡು ಚಳಿಯಿಂದ ಪಾರಾಗಲು ಮೈ ಬಿಸಿ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂತು.
ಮಂಗಳವಾರ ಬೆಳಗ್ಗೆ 8.45 ಗಂಟೆಯಾದರೂ ದಟ್ಟ ಮಂಜು ಇದ್ದುದರಿಂದ ಎಂದಿನಂತೆ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮಾಮೂಲಿನಂತೆ ಎದ್ದು ರೆಡಿಯಾಗಿ 7 ಗಂಟೆಯಿಂದಲೇ ಕೊರೆವ ಥಂಡಿ, ದಟ್ಟ ಮಂಜು ಹಾಗೂ ಮೈನಡುಗಿಸುವ ಚಳಿ ನಡುವೆಯೂ ಸ್ವೆಟರ್, ಜರ್ಕಿನ್ ಧರಿಸಿ ಶಾಲಾ-ಕಾಲೇಜುಗಳತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬೆಳಗ್ಗೆ 8.50 ರ ನಂತರ ಸೂರ್ಯನ ಕಿರಣಗಳು ಪ್ರಜ್ವಲಿಸಿದಂತೆ ದಟ್ಟವಾಗಿ ಆವರಿಸಿದ್ದ ಮಂಜು ನಿಧಾನವಾಗಿ ಕಡಿಮೆಯಾಯಿತು.
Comments are closed.