ಕುಣಿಗಲ್: ಕಸಬಾ ಹೋಬಳಿಯ ಕೆರೆಗಳಿಗೆ ಸಮಗ್ರ ನೀರಾವರಿ ಕಲ್ಪಿಸುವಂತೆ ಆಗ್ರಹಿಸಿ ಕುಣಿಗಲ್ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬುಧವಾರ ಪಟ್ಟಣದ ಪ್ರವಾಸಿ ಮಂದಿರದ ಬಳಿ ಪಕ್ಷಾತೀತವಾಗಿ ನೀರಾವರಿ ಸಮಿತಿ ಅಧ್ಯಕ್ಷ ಮಹಾರಾಷ್ಟ್ರ ಶಿವಣ್ಣ ನೇತೃತ್ವದಲ್ಲಿ ಸಂಘಟಿತರಾದ ರೈತರು, ಗ್ರಾಮಸ್ಥರು ಪಟ್ಟಣದ ತಾಲೂಕು ಕಚೇರಿವರೆಗೂ ಪ್ರತಿಭಟನೆ ಮೆರವಣಿಯಲ್ಲಿ ಆಗಮಿಸಿ, ಸಭೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ಶಿವಣ್ಣ, ಕಸಬಾ ಹೋಬಳಿಯ ಪ್ರಮುಖ ಕೆರೆಗಳಲ್ಲಿ ನೀರಿಲ್ಲ, ಹೇಮಾವತಿ ಮೂಲ ಯೋಜನೆಯಂತೆ ನೀರು ಹರಿಸಿಲ್ಲ, ಪೈಪ್ ಲೈನ್, ಓಪನ್ ಕೆನಾಲ್ ಯಾವುದರ ಮೂಲಕವೆ ಆಗಲಿ, ನಮಗೆ ನೀರು ಹರಿಸಬೇಕು, ನೀರಿಲ್ಲದೆ ಬರಿಬೋರ್ ವೆಲ್ ಆಶ್ರಯಿಸಿದ ರೈತರ ಬದುಕು ಕಷ್ಟವಾಗುತ್ತಿದೆ, ಕಸಬಾ ಹೋಬಳಿಗೆ ನೀರು ಹರಿಸಲು ಕ್ರಮಕೈಗೊಳ್ಳದೆ ಇದ್ದಲ್ಲಿ ಅಂದು ವೈ.ಕೆ.ರಾಮಯ್ಯ ರಾಷ್ಟ್ರೀಯ ಹೆದ್ದಾರಿಗೆ ಗೋಡೆ ಕಟ್ಟಿದ ಹಾಗೆ ರಾಜ್ಯಹೆದ್ದಾರಿ 33ಕ್ಕೆ ಗೋಡೆಕಟ್ಟಿ ಹೋರಾಟ ನಡೆಸಲಾಗುವುದು, ಪೊಲೀಸರ ಲಾಠಿ, ಗುಂಡಿಗೆ ಹೆದರೊಲ್ಲ, ಎಂತಹ ಬೆದರಿಕೆ ಬಂದರೂ ಜಗ್ಗದೆ ನೀರು ಪಡೆಯಲು ಎಂಥಾ ಹೋರಾಟ ಬೇಕಾದರೂ ನಡೆಸಲಾಗುವುದು ಎಂದರು.
ಜಿಪಂ ಮಾಜಿ ಅಧ್ಯಕ್ಷ ಡಾ.ರವಿ ನಾಗರಾಜಯ್ಯ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಅಧಿಕಾರಕ್ಕೆ ಬಂದಾಗಲೆಲ್ಲ ತಾಲೂಕಿಗೆ ಹೇಮಾವತಿ ನೀರಿನ ಅನ್ಯಾಯವಾಗಿದೆ, ರಾಮಸ್ವಾಮಿಗೌಡರ ಕಾಲದಲ್ಲಿ ನಾಗಮಂಗಲಕ್ಕೆ ನಮ್ಮ ಪಾಲಿನ ನೀರನ್ನು ಕೊಡಬೇಕಾಗಿದೆ, ಈಗ ಹಾಲಿ ಶಾಸಕ ಡಾ.ರಂಗನಾಥ್ ಧೋರಣೆಯಿಂದ ನಮಗೆ ಮೀಸಲಿರುವ ನೀರು ಮಾಗಡಿಗೆ ಕೊಡಲು ಪೈಪ್ ಲೈನ್ ಮಾಡಲಾಗುತ್ತಿದೆ, ಈಗಾಗಲೆ ದೊಡ್ಡಕೆರೆ ನೀರನ್ನು ಸಮಗ್ರವಾಗಿ ರೈತರಿಂದ ದೂರ ಮಾಡಿದ್ದು, ಇದೀಗ ಪೈಪ್ ಲೈನ್ ಮೂಲಕ ಹೇಮೆ ನೀರು ಹರಿಸಿದರೆ ಅದನ್ನು ನೇರವಾಗಿ ಮಾಗಡಿಗೆ ಹರಿಸಿ ತಾಲೂಕಿನ ಜನರ ಪಾಲಿಗೆ ನೀರಿಲ್ಲದಂತೆ ಮಾಡುವ ಹುನ್ನಾರ ಈ ಕಾಂಗ್ರೆಸ್ ಸರ್ಕಾರದ್ದು, ಹಿಂದೆ ಜೆಡಿಎಸ್ ಶಾಸಕ ಡಿ.ನಾಗರಾಜಯ್ಯ ಅವಧಿಯಲ್ಲಿ ಗವಿಮಠದ ಹತ್ತಿರ ನಿಂತ ನಾಲಾ ಕಾಮಗಾರಿ ಈ ಶಾಸಕರ ಏಳು ವರ್ಷದ ಅವಧಿಯಲ್ಲಿ ಒಂದಿಂಚು ಮಾಡಿಲ್ಲ, ಇದು ಇವರ ಸಾಧನೆ, ಕೇವಲ 90 ಕೋಟಿ ರೂ. ವೆಚ್ಚ ಮಾಡಿದರೆ ತಾಲೂಕಿನ ಕಾಲುವೆ ಕಾಮಗಾರಿ ಪೂರ್ಣಗೊಳ್ಳುತ್ತೆ, ಇದು ಶಾಸಕರಿಗೆ ಬೇಕಿಲ್ಲ, ತಾಲೂಕಿನ ಎಲ್ಲಾ ಕೆರೆಗಳಿಗೂ ಸಮಗ್ರವಾಗಿ ನೀರು ಹರಿಸಬೇಕು, ಜನತೆಗೆ ಸುಳ್ಳು ಹೇಳಿ ದಾರಿ ತಪ್ಪಿಸುವ ಯೋಜನೆ ಬೇಕಿಲ್ಲ, ಇಂದು ಸಾಂಕೇತಿಕವಾಗಿ ಹೋರಾಟ ಮಾಡುತ್ತಿದ್ದು ಮುಂದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ಹಾಲಿ ಶಾಸಕ ಡಾ.ರಂಗನಾಥ್, ಮಾಜಿ ಸಂಸದ ಡಿ.ಕೆ.ಸುರೇಶ್ ನಾಟಕವಾಡಿ ತಾಲೂಕಿನ ಜನತೆಗೆ ಹೇಮೆ ನೀರಿನ ವಿಷಯದಲ್ಲಿ ವಂಚನೆ ಮಾಡಿದ್ದಾರೆ, ಚುನಾವಣೆ ಸಮಯದಲ್ಲಿ ಜನತೆಗೆ ಆಮೀಷ ನೀಡಿ ವಂಚನೆ ಮಾಡಿದ್ದ ಶಾಸಕರಿಗೆ ಲೋಕಸಭೆ ಚುನಾವಣೆಯಲ್ಲಿ ತಾಲೂಕಿನ ಜನ ಪಾಠ ಕಲಿಸಿದ್ದಾರೆ, ನೀರಾವರಿ ಹೆಸರಲ್ಲಿ 1800 ಕೋಟಿ ರೂ. ಕಾಮಗಾರಿ ಎಂದು ತಾಲೂಕಿನ ಜನತೆ ವಂಚಿಸಲು ಶಾಸಕರು, ಶಾಸಕರ ಸಂಬಂಧಿಗಳು ತಾಲೂಕಿನ ಜನರನ್ನು ಮೋಸ ಮಾಡುತ್ತಿದ್ದಾರೆ, ತಾಲೂಕಿಗೆ ಮೀಸಲಾಗಿರುವ ಹೇಮಾವತಿ ನೀರಿನಲ್ಲಿ ಮಾಗಡಿಗೆ ನೀರು ಹರಿಸಲು ಮುಂದಾಗಿರುವ ಶಾಸಕರ ಕ್ರಮ ತಾಲೂಕಿಗೆ ವಂಚನೆ ಮಾಡುವ ಕೆಲಸವಾಗಿದೆ, ಲಿಂಕ್ ಕೆನಾಲ್ ವಿಷಯದಲ್ಲಿ ಡಿ-26ನ ಮುಂದಕ್ಕೆ ಕೆಲಸ ಮಾಡುತ್ತಿರುವ ಶಾಸಕರ ನಡೆ ಅನುಮಾನಾಸ್ಪದ, ಲಿಂಕ್ ಕೆನಾಲ್ ನಿಟ್ಟಿನಲ್ಲಿ ತಾಲೂಕಿನ ವಿರೋಧ ಪಕ್ಷಗಳೊಂದಿಗೆ, ಬುದ್ಧಿಜೀವಿ ಗಳೊಂದಿಗೆ ಚರ್ಚಿಸದೆ ,ವಿವರ ನೀಡದ ಶಾಸಕರು ಕಾಮಗಾರಿಗೆ ಸಹಕಾರ ಕೋರುವ ನಾಟಕವಾಡುತ್ತಿದ್ದಾರೆ, ಯಾವುದೇ ಕಾರಣಕ್ಕೂ ನಮ್ಮ ಪಾಲಿನ ನೀರು ಮಾಗಡಿಗೆ ಹರಿಸಲು ಬಿಡುವುದಿಲ್ಲ ಎಂದರು.
ಹಿತ್ತಲಹಳ್ಳಿ ಮಠದ ಸದಾಶಿವಾಚಾರ್ಯ ಸ್ವಾಮೀಜಿ, ತಾಲೂಕು ಬಿಜೆಪಿಅಧ್ಯಕ್ಷ ಬಲರಾಮ್, ಜಿಪಂ ಮಾಜಿ ಸದಸ್ಯ ಕೆ.ಹೆಚ್.ಶಿವಣ್ಣ ಮಾತನಾಡಿದರು, ಪ್ರಮುಖರಾದ ಮೊದುರು ಗಂಗಾಧರ, ತರಿಕೆರೆ ಪ್ರಕಾಶ, ವರದರಾಜು, ನಾಗಾನಂದ, ಹರೀಶ ನಾಯಕ, ರಂಗಸ್ವಾಮಿ, ನಿಖಿಲ್, ಶಿವಕುಮಾರ, ಶಿವರಾಮ, ರಮೇಶ, ಇ.ಮಂಜು, ಜಿ.ಕೆ.ನಾಗಣ್ಣ, ಹೇರೂರು ಶಂಕರ, ಕರಿಗೌಡ, ಬಾಲನಾಯಕ, ದಾಸೇಗೌಡ, ಸುರೇಶ, ರಂಗಸ್ವಾಮಿ ಮಹಾದೇವ, ಮಂಜುನಾಥ ಇತರರು ಇದ್ದರು.
ಕಸಬಾ ಹೋಬಳಿ ಯ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ರೈತರು ಪಾಲ್ಗೊಂಡಿದ್ದರು.
Comments are closed.