ತುಮಕೂರು: ಸಮಾಜದ ಪ್ರತಿಯೊಬ್ಬರೂ ತಾರತಮ್ಯವಿಲ್ಲದೆ, ಸಮಾನವಾಗಿ ಬಾಳುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ, ಹಕ್ಕುಗಳ ಅರಿವಿಲ್ಲದವರಿಂದ ಕಾನೂನಿನ ಉಲ್ಲಂಘನೆ ಆಗಬಹುದು ಅಥವಾ ಹಕ್ಕುಗಳ ಬಗ್ಗೆ ತಿಳಿದಿಲ್ಲದವರ ಮೇಲೆ ದೌರ್ಜನ್ಯ ನಡೆಯಬಹುದು, ಈ ಕಾರಣದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಾನವ ಹಕ್ಕುಗಳ ಅರಿವು ಮೂಡಿಸಬೇಕು ಎಂದು ಅಡಿಷನಲ್ ಎಸ್ಪಿ ವಿ.ಮರಿಯಪ್ಪ ಹೇಳಿದರು.
ಮಾನವ ಹಕ್ಕುಗಳ ಜಾಗೃತಿ ದಳ ಹಾಗೂ ವಿದ್ಯೋದಯ ಕಾನೂನು ಕಾಲೇಜಿನ ಆಶ್ರಯದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾರೂ ಯಾರ ಹಕ್ಕನ್ನು ಕಸಿಯುವಂತಿಲ್ಲ, ಎಲ್ಲರಿಗೂ ಸಮಾನ ಹಕ್ಕಿದೆ, ಇದಕ್ಕೆ ಸಂಬಂಧಿಸಿದಂತೆ ನಿಬಂಧನೆಗಳನ್ನು ರೂಪಿಸಲಾಗಿದೆ, ಹಕ್ಕುಗಳ ಅರಿವು ಬೆಳೆಸಿಕೊಂಡರೆ ಸಮಾಜದಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳಲು ಸಾಧ್ಯವಾಗುತ್ತದೆ ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿವೆ, ಮಕ್ಕಳ ಮುಗ್ದತೆಯ ದುರುಪಯೋಗವಾಗುತ್ತಿದೆ, ಒಂದು ಜೈಲಿನಲ್ಲಿ ಸುಮಾರು ಮೂರನೇ ಒಂದರಷ್ಟು ಪೋಕ್ಸೋ ಪ್ರಕರಣದ ಕೈದಿಗಳಿರುತ್ತಾರೆ ಎಂದರೆ, ಮಕ್ಕಳ ಮೇಲಿನ ದೌರ್ಜನ್ಯ ಯಾವ ಮಟ್ಟಕೆ ಇದೆ ಎಂಬುದು ಕಳವಳಕಾರಿ ವಿಚಾರ, ಆರೋಗ್ಯ ಇಲಾಖೆಯ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 1.60 ಲಕ್ಷ ಅಪ್ರಾಪ್ತ ಹೆಣ್ಣುಮಕ್ಕಳು ಗರ್ಭಿಣಿಯರಾಗಿದ್ದಾರೆ, ಹೀಗಿದ್ದ ಮೇಲೆ ಅಷ್ಟೂ ಪ್ರಕರಣಗಳೂ ಪೋಕ್ಸೋ ಅಡಿ ಬರುತ್ತವೆ ಅಲ್ಲವೆ? ಎಂದರು.
ಮಾನವ ಹಕ್ಕುಗಳ ಜಾಗೃತಿ ದಳದ ಜಿಲ್ಲಾಧ್ಯಕ್ಷ ಹೆಚ್.ಎಂ.ರವೀಶಯ್ಯ ಮಾತನಾಡಿ, ಎಲ್ಲರೂ ಸಮಾನರಾಗಿ, ಸ್ವಾಭಿಮಾನದಿಂದ ಬಾಳಲು ಮಾನವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿಯಬೇಕು, ಹಕ್ಕುಗಳ ಉಲ್ಲಂಘನೆಯಾದಾಗ, ಯಾರಾದರೂ ತಮ್ಮ ಹಕ್ಕುಗಳ ದಮನ ಮಾಡಿದಾಗ ಆಯೋಗಕ್ಕೆ ದೂರು ನೀಡಿ ತಮ್ಮ ಹಕ್ಕು ಚಲಾಯಿಸಬಹುದು ಎಂದರು.
ವಿದ್ಯೋದಯ ಫೌಂಡೇಶನ್ ನ ಹೆಚ್.ಎಸ್.ರಾಜು, ಮಾನವಹಕ್ಕುಗಳ ಜಾಗೃತ ದಳದ ರಾಜ್ಯ ಅಧ್ಯಕ್ಷ ಲೋಕೇಶ್ವರ್, ವಿದ್ಯೋದಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶಮಾ ಸೈಯದಿ, ಉಪನ್ಯಾಸಕ ಡಾ.ಜಿ.ವೆಂಕಟೇಶ್, ಹಿರಿಯ ನ್ಯಾಯವಾದಿ ಬೆಳಗೆರೆ ಶಿವಕುಮಾರ್, ಮಾನವ ಹಕ್ಕುಗಳ ಜಾಗೃತಿ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪ್ರಸಾದ್, ವಿದ್ಯೋದಯ ಸಂಸ್ಥೆ ಸಿಇಒ ಪ್ರೊ.ಕೆ.ಚಂದ್ರಣ್ಣ ಮೊದಲಾದವರು ಭಾಗವಹಿಸಿದ್ದರು.
Comments are closed.