ಎಂಟಿಕೆ ಬಗ್ಗೆ ಮಾತಾಡುವ ನೈತಿಕತೆ ಮುದ್ದೇಗೌಡರಿಗಿಲ್ಲ: ಗಂಗಾಧರ್

213

Get real time updates directly on you device, subscribe now.

ತುರುವೇಕೆರೆ: ಬಿಜೆಪಿ ವಕ್ತಾರ ಮುದ್ದೇಗೌಡರು ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಗೋಲಿ ಆಡುವ ಹುಡುಗನ ಮುಂದೆ ಹೀನಾಯ ಸೋತಿದ್ದನ್ನು ಮರೆತು ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕೃಷ್ಣಪ್ಪ ಅವರು ಮುಂದೆ ಶಾಸಕರಾಗುವುದಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಕೊಳಾಲ ಗಂಗಾಧರ್ ಟಾಂಗ್ ನೀಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದೀಗ ಬಿಜೆಪಿ ವಕ್ತಾರರೆನಿಸಿರುವ ಮುದ್ದೇಗೌಡರು ಎಂ.ಟಿ.ಕೃಷ್ಣಪ್ಪ ಅವರಿಗೆ ಅಧಿಕಾರವಿದ್ದಾಗ ಜೊತೆಯಲ್ಲಿದ್ದರು, ಇಂದು ಕೃಷ್ಣಪ್ಪ ಅವರು ಕ್ರಿಮಿನಲ್ ರಾಜಕಾರಣಿ ಎಂದು ಆರೋಪಿಸುವ ಮುದ್ದೇಗೌಡರು ಅಂದು ಜೊತೆಯಲ್ಲಿದ್ದದ್ದು ಯಾಕೆ ಎಂಬ ವಿಚಾರ ಎಲ್ಲರಿಗೂ ಗೊತ್ತು, ಇಂದು ಬಿಜೆಪಿಯಲ್ಲಿ ಗುರುತಿಸಿಕೊಂಡು ಹೇಳಿಕೆ ನೀಡುತ್ತಿರುವ ಮುದ್ದೇಗೌಡರ ನಡೆ ಮುಂದಿನ ಚುನಾವಣೆ ವೇಳೆ ಯಾವ ಪಕ್ಷದ ಕಡೆಯೋ ಎಂದು ಲೇವಡಿ ಮಾಡಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ವಿರುದ್ಧ ದಾಖಲಾಗಿರುವ ಪ್ರಕರಣಗಳು ಸಾಮಾಜಿಕ ಹೋರಾಟಕ್ಕಾಗಿ ಎಂಬುದನ್ನು ಅರಿಯಲಿ, ಶಾಸಕ ಮಸಾಲ ಜಯರಾಮ್ಗೆ ತಾನು ಪರಮ ನಿಷ್ಟ ಎಂದು ಬಿಂಬಿಸಿಕೊಳ್ಳುವ ಭರದಲ್ಲಿ ವಿನಾಕಾರಣ ಕೃಷ್ಣಪ್ಪನವರ ಬಗ್ಗೆ ಮುದ್ದೇಗೌಡರು ಮಾತನಾಡುವ ವೇಳೆ ಎಚ್ಚರಿಕೆ ವಹಿಸಲಿ, ಕೃಷ್ಣಪ್ಪನವರನ್ನು ಗೂಂಡಾ ಕಾಯ್ದೆಯಡಿ ಪೊಲೀಸ್ ಬಂದಿಸದಿದ್ದರೆ ಬಿಜೆಪಿ ಕಾರ್ಯಕರ್ತರೊಡಗೂಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದೀರಿ, ಆದರೆ ಜೆಡಿಎಸ್ ಪಕ್ಷ ಪ್ರಬಲವಾಗಿದ್ದು ತಕ್ಕ ಉತ್ತರ ನೀಡಲು ನಿಷ್ಟಾವಂತ ಕಾರ್ಯಕರ್ತರು ಸಿದ್ದರಿದ್ದಾರೆ ಎಂಬುದು ನೆನಪಿರಲಿ ಎಂದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾಜಿಕ ಶಾಂತಿಗೆ ಎಂ.ಟಿ.ಕೃಷ್ಣಪ್ಪನಿಂದ ಭಂಗ ಉಂಟಾಗಿದೆ ಎಂದು ಶಾಸಕ ಮಸಾಲ ಜಯರಾಮ್ ಹೇಳುತ್ತಾರೆ, ಕ್ಷೇತ್ರದ ಜನತೆ ತಮಗೆ ಆಶೀರ್ವದಿಸಿ ಅಧಿಕಾರ ನೀಡಿದ್ದಾರೆ, ಈ ವೇಳೆ ತಮ್ಮ ಅಧಿಕಾರ ಬಳಸಿ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ವಾತಾವರಣ ಮೂಡಿಸಲಿ ಎಂಬುದಾಗಿ ಜನತೆಯ ಪರವಾಗಿ ಮನವಿ ಮಾಡುತ್ತೇನೆ ಎಂದರು.
ಗೋಷ್ಠಿಯಲ್ಲಿ ವಿಎಸ್ಎಸ್ಎನ್ ಅಧ್ಯಕ್ಷ ಕುಶಾಲ್ ಕುಮಾರ್, ಮುಖಂಡ ಶಂಕರೇಗೌಡ, ಪರಮೇಶ್ ಇದ್ದರು.

Get real time updates directly on you device, subscribe now.

Comments are closed.

error: Content is protected !!