ತುಮಕೂರು: ಪ್ರತಿಭಾ ಕಾರಂಜಿ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಗೆಡವಲು ಸೂಕ್ತ ವೇದಿಕೆಯಾಗಿದೆ ಎಂದು ಡಿಡಿಪಿಐ (ಅಭಿವೃದ್ಧಿ) ಮಂಜುನಾಥ್.ಕೆ. ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಶಾಲಾಶಿಕ್ಷಣ ಇಲಾಖೆ, ತುಮಕೂರು ದಕ್ಷಿಣ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು 2024-25ಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕು ಕ್ಲಸ್ಟರ್ ಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಇಲ್ಲಿಗೆ ಬಂದಿದ್ದೀರಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಲಲಿತ ಕಲೆಗಳು ಬದುಕಿನ ಭಾಗವಾಗಬೇಕಿದೆ, ಹಾಗಾಗಿ ಸರಕಾರ ನಲಿಕಲಿ ಕಾರ್ಯಕ್ರಮ ಜಾರಿಗೆ ತಂದಿದೆ ಎಂದರು.
ಪಠ್ಯ ಎಷ್ಟು ಮುಖ್ಯವೋ, ಪಠ್ಯೇತರ ಚಟುವಟಿಕೆಗಳು ಅಷ್ಟೇ ಮುಖ್ಯ, ಹಾಗಾಗಿ ಮಕ್ಕಳು ಓದಿನ ಜೊತೆ, ಆಟೋಟಗಳಲ್ಲಿ, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಆಸಕ್ತಿ ಬೆಳೆಸಿಕೊಳ್ಳಬೇಕು, ಜನಪದ ಸೇರಿದಂತೆ ಎಲ್ಲಾ ಸಾಂಪ್ರಾದಾಯಿಕ ಕಲೆ ಕಲಿತು ಪ್ರದರ್ಶಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಸದೃಢತೆ ಹೊಂದುವಂತೆ ಮಂಜುನಾಥ.ಕೆ. ಕರೆ ನೀಡಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ಇಂದು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಮ್ಮಿಕೊಳ್ಳಲಾಗಿದೆ, ಇಂತಹ ವೇದಿಕೆಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ತರಲು ಸೂಕ್ತ ವೇದಿಕೆಗಳಾಗಿವೆ, ಸರಕಾರದ ತಂದಿರುವ ಈ ಯೋಜನೆಗಳಿಂದ ಮಕ್ಕಳು ಪಠ್ಯೇತರ ಚಟುವಟಿಕೆಗಳ ಕಡೆಗೆ ಗಮನಹರಿಸಲು ಮಕ್ಕಳಿಗೆ ಸಹಕಾರಿಯಾಗಿದೆ, ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಸಂಘದಿಂದ ಗುರುಭವನ ನಿರ್ಮಾಣಕ್ಕೆ ಮುಂದಾಗಿದ್ದು, ಡಿಡಿಪಿಐ ಅವರು ಗುರುಭವನಕ್ಕೆ ಹೆಚ್ಚಿನ ಸಹಕಾರ ನೀಡಬೇಕು, ಮುಖ್ಯೋಪಾಧ್ಯಾಯರ ಮೇಲಿರುವ ಒತ್ತಡ ಕಡಿಮೆ ಮಾಡಿ ಬೋಧನೆಗೆ ಹೆಚ್ಚು ಒತ್ತು ನೀಡುವಂತಹ ವಾತಾವರಣ ಸೃಷ್ಟಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ (ಆಡಳಿತ) ಹೆಚ್.ಕೆ.ಮನಮೋಹನ್ ಮಾತನಾಡಿ, ಪ್ರತಿಭಾ ಕಾರಂಜಿ ಇಲಾಖೆಯ ಒಂದು ಪ್ರಮುಖ ಕಾರ್ಯಕ್ರಮವಾಗಿದೆ, ಈ ಮೊದಲು ಶಾಲಾ ವಾರ್ಷಿಕೋತ್ಸವದಲ್ಲಿ ಮಾತ್ರ ಮಕ್ಕಳ ಪ್ರತಿಭೆ ಪ್ರದರ್ಶಿಸಲು ಅವಕಾಶವಿತ್ತು, ಆದರೆ ಈಗ ಇಲಾಖೆಯೇ ಪ್ರತಿಭಾ ಕಾರಂಜಿ, ಕಲೋತ್ಸವದ ಮೂಲಕ ಮಕ್ಕಳ ಪ್ರತಿಭೆ ಹೊರತರಲು ಮುಂದಾಗಿದೆ, ಸರ್ವಶಿಕ್ಷಣ ಅಭಿಯಾನದ ನಂತರ ಇಂತಹ ಕಾರ್ಯಕ್ರಮ ಹೆಚ್ಚಾಗಿವೆ, ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಲು ಆ ಮೂಲಕ ಕಲೆ, ಸಂಸ್ಕೃತಿ ಪ್ರಚುರ ಪಡಿಸಲು ಮುಂದಾಗಿದೆ, ಮಕ್ಕಳು ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ತಾವು ಕಲಿಯುವ ಶಾಲೆಗೆ, ತಾಲೂಕಿಗೆ, ಜಿಲ್ಲೆಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ನೋಡಲ್ ಅಧಿಕಾರಿ ಪ್ರಮೀಳಾ ಎಸ್.ಆರ್, ಉಪ ನಿರ್ದೇಶಕರ ಕಚೇರಿ ಡಿಪಿಇಓ ಎಂ.ಬಿ.ಪರಮೇಶ್ವರಪ್ಪ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಜಯರಾಂ, ಗುಬ್ಬಿ ಅಧ್ಯಕ್ಷ ಎನ್.ಟಿ.ಪ್ರಕಾಶ್, ಜಿಲ್ಲಾ ಸಂಘದ ಕಾರ್ಯದರ್ಶಿ ಜಯಲಕ್ಷ್ಮಮ್ಮ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಶ್.ಕೆ.ಎಸ್, ತುಮಕೂರು ತಾಲೂಕು ಅಧ್ಯಕ್ಷ ತಿಮ್ಮೇಗೌಡ, ತಾಲ್ಲೂಕು ಗೌರವಾಧ್ಯಕ್ಷ ಶಿವಕುಮಾರ್.ಸಿ, ವಿವಿಧ ಶಿಕ್ಷಕರ ಸಂಘಟನೆಗಳ ಮುಖಂಡರಾದ ಎಚ್.ಸಿ. ಸತ್ಯಪ್ರಕಾಶ್, ಅನುಸೂಯಾದೇವಿ, ದೊಡ್ಡರಂಗಪ್ಪ, ಮಂಜುನಾಥ್, ಲೋಕೇಶ್ ರೆಡ್ಡಿ, ಲೋಕೇಶ್.ಕೆ.ಹೆಚ್, ಗಂಗಾಧರ್.ಎಚ್.ಆರ್, ಷಡಕ್ಷರಿ, ಶಿವಕುಮಾರ್, ಸಿದ್ದಮ್ಮ, ಸುಂದರೇಶ್ ಹಾಜರಿದ್ದರು.
Comments are closed.