ಭವ್ಯ ಭಾರತ ನಿರ್ಮಾಣ ವಾಜಪೇಯಿ ಕನಸು

ಮಾಜಿ ಪ್ರಧಾನಿ ದಿ.ವಾಜಪೇಯಿ ಜನ್ಮದಿನದ ಸುಶಾಸನ ದಿನ ಆಚರಣೆ

3

Get real time updates directly on you device, subscribe now.


ತುಮಕೂರು: ತತ್ವನಿಷ್ಠ ರಾಜಕಾರಣಿಯಾಗಿ ಹೆಸರಾದ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ಮಾಡಲು ತಮ್ಮದೇ ಆದ ಕನಸು ಹೊಂದಿದ್ದರು, ಅವರು ಪ್ರಧಾನಿಯಾಗಿ ತಮ್ಮ ಕನಸಿನ ಭಾರತದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ಜಾರಿಗೆ ತಂದು ದೇಶಕ್ಕೆ ದೊಡ್ಡ ಕೊಡುಗೆ ನೀಡಿದರು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದಿ.ಎ.ಬಿ.ವಾಜಪೇಯಿ ಅವರ 100 ಜನ್ಮದಿನದ ಅಂಗವಾಗಿ ಸುಶಾಸನ ದಿನ ಆಚರಣೆ ಸಮಾರಂಭದಲ್ಲಿ ಸಚಿವ ಸೋಮಣ್ಣ, ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿ ಮಾತನಾಡಿ, ಈ ಮಹಾನ್ ನಾಯಕನ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನಾವು ನಮ್ಮ ಕಾರ್ಯವೈಖರಿ ಹೇಗಿದೆ, ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡುತ್ತಿದ್ದೇವೆಯೆ ಎಂದು ಚಿಂತನೆ ಮಾಡಬೇಕಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಗ್ವಾಲಿಯರ್ ನಲ್ಲಿ 1924ರಲ್ಲಿ ಜನಿಸಿದ ವಾಜಪೇಯಿ ಅವರು ವಿದ್ಯಾರ್ಥಿ ದಿಸೆಯಲ್ಲೇ ದೇಶಾಭಿಮಾನ ಮೈಗೂಡಿಸಿಕೊಂಡು ಬೆಳೆದವರು, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಇವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರಿಯರಾಗಿದ್ದರು, ಅಟಲ್ ಎಂದರೆ ಗುರಿ ಸಾಧಿಸುವ, ಬಿಹಾರಿ ಎಂದರೆ ವಿವೇಚನಾ ಯುಕ್ತ, ಬಿಹಾರಿ ಎಂಬುದು ಅವರ ಕುಟುಂಬದ ಹೆಸರು, ವಾಜಪೇಯಿ ಅವರು ತಮ್ಮ ಹೆಸರಿಗೆ ತಕ್ಕಂತೆ ನಡೆದುಕೊಂಡರು, ತಮ್ಮ ಬುದ್ಧಿ ಸಾಮರ್ಥ್ಯದಿಂದ ಜಗತ್ತನ್ನೇ ಗೆದ್ದ ವ್ಯಕ್ತಿತ್ವ ಅವರದ್ದು ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ ಸುಭದ್ರ ಭಾರತಕ್ಕೆ ವಾಜಪೇಯಿ ಅವರು ನೀಡಿದ ಯೋಜನೆಗಳು, ಅವರ ದೂರದೃಷ್ಟಿ ಆಡಳಿತ ದೇಶದ ಮುನ್ನಡೆಗೆ ತಳಹದಿಯಾಗಿದೆ, ಅವರ ಸಂಕಲ್ಪವನ್ನು ಸಾಕಾರಗೊಳಿಸುವತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಬಲಿಷ್ಠ ಭಾರತ ನಿರ್ಮಾಣಕ್ಕೆ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಹೇಳಿದರು.

ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಅಪ್ಪಟ ದೇಶಪ್ರೇಮಿ, ಸಮರ್ಥ ಆಡಳಿತಗಾರರಾದ ವಾಜಪೇಯಿ ಅವರ ಕಾರ್ಯವೈಖರಿ ಯುವ ಜನರಿಗೆ ಮಾದರಿಯಾಗಿದೆ, ತಾವು ರಾಜಕಾರಣಕ್ಕೆ ಬರಲು ವಾಜಪೇಯಿ ಅವರೇ ಪ್ರೇರಣೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ನಾಗರತ್ನಮ್ಮ, ನಗರ ಬಿಜೆಪಿ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ರೈತ ಮೋರ್ಚಾ ನಗರ ಅಧ್ಯಕ್ಷ ಸತ್ಯಮಂಗಲ ಜಗದೀಶ್ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!