ಶಿರಾ: ಹರಿವ ನೀರನ್ನು ನಿಲ್ಲಿಸಿ, ನಿಂತ ನೀರನ್ನು ಇಂಗಿಸಿ ಅಂತರ್ಜಲ ಹೆಚ್ಚಿಸುವ ಉದ್ದೇಶದೊಂದಿಗೆ ತಾಲೂಕಿನಲ್ಲಿ ನಿರ್ಮಾಣ ಮಾಡಿದ 121 ಬ್ಯಾರೇಜ್ ಗಳಲ್ಲಿ ಸುಮಾರು 44 ಬ್ಯಾರೆಜ್ ಗಳು ಭರ್ತಿಯಾಗಿ ನೀರಿನ ಸಮೃದ್ಧಿ ಕಾಣುತ್ತಿರುವುದು ನನ್ನ ರಾಜಕೀಯ ಜೀವನದಲ್ಲಿ ಸಾರ್ಥಕತೆ ಮೂಡಿಸಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ. ಜಯಚಂದ್ರ ಹೇಳಿದರು.
ತಾಲೂಕಿನ ಗೌಡಗೆರೆ ಹೋಬಳಿಯ ಹುಣಸೆಹಳ್ಳಿ, ಹೇರೂರು, ಮೆಳೆಕೋಟೆ ಗ್ರಾಮಗಳಲ್ಲಿ ಭರ್ತಿಯಾಗಿರುವ ಬ್ಯಾರೇಜ್ ಗಳಿಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಿ ಮಾತನಾಡಿ, ಶಿರಾ ಕ್ಷೇತ್ರವನ್ನು ತ್ರಿವೇಣಿ ಸಂಗಮ ಮಾಡುವ ಸಂಕಲ್ಪ ನನ್ನದಾಗಿದ್ದು ಎತ್ತಿನಹೊಳೆ, ಅಪ್ಪರ ಭದ್ರ, ಹೇಮಾವತಿ ನದಿ ನೀರು ತಾಲೂಕಿನಲ್ಲಿ ಸಮಾಗಮವಾಗುವ ದಿನಗಳು ಅತಿ ಶೀಘ್ರದಲ್ಲಿಯೇ ಬರಲಿದ್ದು ಆ ದಿನ ಶಿರಾ ಪಾಲಿಗೆ ಐತಿಹಾಸಿಕ ದಿನವಾಗಲಿದೆ, ಗೌಡಗೆರೆ ಹೋಬಳಿಯ ಹುಣಸೆಹಳ್ಳಿ, ಹೇರೂರು, ಮೆಳೆಕೋಟೆ ಸೇರಿದಂತೆ ಹಲವಾರು ಗ್ರಾಮಗಳಿಗೆ ನೀರು ಕೊಡಬೇಕೆಂಬ ಉತ್ಸಾಹ ನನ್ನದಾಗಿದ್ದು, ವಾಣಿವಿಲಾಸ ಡ್ಯಾಮ್ ನಿಂದ ಗಾಯತ್ರಿ ಜಲಾಶಯಕ್ಕೆ ನೀರು ತರುವ ಕ್ರಿಯಾಯೋಜನೆ ಸಿದ್ಧಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌಖಿಕವಾಗಿ ಸೂಚಿಸಿದ್ದು ಅತಿ ಶೀಘ್ರದಲ್ಲಿ ಕ್ರಿಯಾ ಯೋಜನೆ ರೂಪುಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಹುಣಸೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಪಿ.ಶಶಿಧರ, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುದರ್ಶನ್, ಮುಖಂಡರಾದ ಹೇರೂರು ಲಕ್ಷ್ಮೀರಾಜ್, ಪದ್ಮನಾಭ, ಮೋಹನ ಗೌಡ, ದಂಡಿಕೆರೆ ತಿಪ್ಪೇಸ್ವಾಮಿ, ಹೊಸೂರು ಪುಟ್ಟ ಜುಂಜಯ್ಯ, ಕುಂಟನ ಹಟ್ಟಿ ನಾಗರಾಜು, ತಾಲೂಕು ಪಂಚಾಯತಿ ಮಾಜಿ ಸದಸ್ಯ ನಾಗರಾಜು, ಹನುಮಂತರಾಯ, ಲೋಕೋಪಯೋಗಿ ಇಲಾಖೆ ಎಇಇ ರಮೇಶ್, ಗ್ರಾಮೀಣ ಅಭಿವೃದ್ಧಿ ಇಲಾಖೆ ಎ ಇ ಗಂಗಾಧರ್, ಅಭಿಯಂತರ ಕಾಮರಾಜು, ಪಿಡಿಒ ಆರ್. ನಾಗರಾಜ್, ಕಾಂಗ್ರೆಸ್ ಯುವ ಮುಖಂಡ ನರೇಶ್ ಪಟೇಲ್ ಸೇರಿದಂತೆ ಹಲವರು ಹಾಜರಿದ್ದರು.
Comments are closed.