ಹುಳಿಯಾರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನಲೆಯಲ್ಲಿ ಗೌರವಾರ್ಥ ಶುಕ್ರವಾರ ಎಲ್ಲಾ ಸರ್ಕಾರಿ ಕಚೇರಿಗಳಿಗೂ ರಜೆ ಘೋಷಣೆ ಮಾಡಲಾಗಿದೆ, ಆದರೆ ಹುಳಿಯಾರು ಪಟ್ಟಣ ಪಂಚಾಯತಿ ಸಿಬ್ಬಂದಿ ಮಾತ್ರ ರಜೆ ಮಾಡದೆ ಕೆಲಸದಲ್ಲಿ ನಿರತರಾಗಿದ್ದರು, ಕೆಲಸದ ಸಮಯದಲ್ಲೇ ಕಚೇರಿಯಲ್ಲಿ ಇಲ್ಲದ ಸಿಬ್ಬಂದಿ ರಜೆಯಲ್ಲಿ ಕೆಲಸ ಮಾಡುತ್ತಿರುವುದ ಅಚ್ಚರಿ ಎನ್ನಿಸಿತ್ತು, ಸಾರ್ವಜನಿಕರು, ಪತ್ರಿಕೆಯವರು ಈ ಬಗ್ಗೆ ಪ್ರಶ್ನಿಸಲು ಮುಂದಾದಾಗ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿ ಕಚೇರಿಯಿಂದ ಹೊರಬಂದರು.
ಕೆಲಸದ ದಿನಗಳಲ್ಲೇ ಸರ್ಕಾರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ಮಾತುಗಳು ಕೇಳಿಬರುವುದು ಸಹಜ, ಆದರಲ್ಲೂ ಹುಳಿಯಾರು ಪಂಚಾಯ್ತಿಯಲ್ಲಿ ಸಾರ್ವಜನಿಕರ ಯಾವ ಕೆಲಸವೂ ಆಗುತ್ತಿಲ್ಲ ಎಂಬ ಆರೋಪ ಇದೆ, ಅಂತಹದರಲ್ಲಿ ಮಾಜಿ ಪ್ರಧಾನಿಯ ಗೌರವಾರ್ಥ ರಜೆಯಲ್ಲಿ ಪಂಚಾಯತಿ ಮುಖ್ಯಾಧಿಕಾರಿ ಸೇರಿದಂತೆ ಕೆಲ ಸಿಬ್ಬಂದಿ ಮಾತ್ರ ಕಚೇರಿಯಲ್ಲಿ ಬಿಡುವಿಲ್ಲದ ರೀತಿ ಕೆಲಸ ಮಾಡಿದ್ದಾರೆ, ಈ ಮೂಲಕ ಮನಮೋಹನ್ ಸಿಂಗ್ ಅವರಿಗೆ ಅಗೌರವ ತೋರಿದ್ದಾರೆ.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪಪಂ ಅಧ್ಯಕ್ಷೆ ರತ್ನಮ್ಮ ಅವರ ಪತಿ ರೇವಣ್ಣ ಅವರು ಗುರುವಾರ ಕಚೇರಿ ಸಿಬ್ಬಂದಿ ಕೆಲಸ ಮಾಡುವಾಗ ಮೇಲ್ಚಾವಣಿಯ ಕಾಂಕ್ರಿಟ್ ಬಿತ್ತು, ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ, ಹಾಗಾಗಿ ಪ್ಲಾಸ್ಟಿಂಗ್ ಕೆಲಸ ಮಾಡಿಸಲು ಗಾರೆಯವರಿಗೆ ತೋರಿಸಲು ಬಂದಿದ್ದೆವು ಎಂಬ ಸಮಜಾಯಿಷಿ ನೀಡಿದರು, ನಂತರ ಮುಖ್ಯಾಧಿಕಾರಿಗಳು ರಜೆಯಲ್ಲಿ ಕೆಲಸ ಮಾಡಬಾರದೆಂದು ಎಲ್ಲೂ ಇಲ್ಲ, ತುರ್ತು ಇದ್ದಿದ್ದರಿಂದ ಬಂದು ಮಾಡುತ್ತಿದ್ದೇವೆ ಎಂದರು.
ಹುಳಿಯಾರು ಪಂಚಾಯ್ತಿಯಲ್ಲಿ ಖಾತೆಗಳು, ಎನ್ ಒಸಿಗನ್ನು ದುಡ್ಡು ಕೊಟ್ಟರೆ ಕದ್ದುಮುಚ್ಚಿ ಮಾಡಿಕೊಡುತ್ತಾರೆ ಎಂಬ ಸಾರ್ವಜನಿಕ ಆರೋಪದ ನಡುವೆ ರಜೆಯಲ್ಲೂ ಕೆಲಸ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, ಅಲ್ಲದೆ ಮಾಮೂಲಿ ರಜೆಗೂ ಮೃತರ ಗೌರವಾರ್ಥ ಕೊಡುವ ರಜೆಗೂ ವ್ಯತ್ಯಾಸವೆ ತಿಳಿಯದಂತೆ ಕೆಲಸ ಮಾಡುವ ಮೂಲಕ ಮೃತರಿಗೆ ಅಗೌರವ ತೋರಿದ್ದಾರೆ, ಮೇಲಧಿಕಾರಿಗಳು ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
Comments are closed.