ಪರಿಶ್ರಮ ಮುಂದಿನ ಯಶಸ್ಸನ್ನು ನಿರ್ಧರಿಸುತ್ತೆ

ನಿಖರತೆಯಿಂದ ಕಾರ್ಯ ನಿರ್ವಹಿಸಿ ಸಾಧನೆ ಮಾತು: ಡಾ.ನಂದಿನಿ

3

Get real time updates directly on you device, subscribe now.


ತುಮಕೂರು: ಪ್ರತಿಯೊಬ್ಬರಲ್ಲಿಯೂ ವಿಶ್ವದ ಅನಂತ ಶಕ್ತಿ ಅಡಗಿದೆ, ಅದನ್ನು ಹೊರ ತರುವುದಕ್ಕೆ ಅತ್ಯವಶ್ಯಕವಾಗಿರುವುದು ಸಂಕಲ್ಪಶಕ್ತಿ ಹಾಗೂ ಇಚ್ಛಾಶಕ್ತಿ, ಪರಿಶ್ರಮ, ಸಮಯ ಪಾಲನೆ, ಆತ್ಮವಿಶ್ವಾಸ ಯಶಸ್ಸಿಗೆ ಬೇಕಿರುವ ಮೂರು ಗುಣಗಳು, ನಿಮ್ಮ ಇಂದಿನ ಪರಿಶ್ರಮ ಮುಂದಿನ ಯಶಸ್ಸನ್ನು ನಿರ್ಧರಿಸುತ್ತದೆ, ಸಮಯ ಅತ್ಯಮೂಲ್ಯವಾದುದು, ನಿಮಗೆ ಯಾವುದು ನಿಜವಾಗಿಯೂ ಅವಶ್ಯಕವಾಗಿರುವುದೋ ಅದರ ಕಡೆ ಗಮನ ಕೊಡಬೇಕೇ ಹೊರತು ವಿಚಲಿತಗೊಳಿಸುವ ವಿಚಾರಗಳನ್ನು ನಿರ್ಲಕ್ಷಿಸಬೇಕು, ನಿಮ್ಮ ಗುರಿಯ ಕಡೆ ಸದಾ ಗಮನವಿರಬೇಕು ಎಂದು ಬೆಂಗಳೂರಿನ ಇಸ್ರೋ ಸಂಸ್ಥೆಯ ಉಪ ನಿರ್ದೇಶಕಿ, ಖ್ಯಾತ ವಿಜ್ಞಾನಿ ಡಾ.ನಂದಿನಿ ಹರಿನಾಥ್ ತಿಳಿಸಿದರು.

ತುಮಕೂರಿನ ರಾಮಕೃಷ್ಣ- ವಿವೇಕಾನಂದ ಆಶ್ರಮದಲ್ಲಿ ಕರ್ನಾಟಕದ ರಾಮಕೃಷ್ಣ- ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಯುವ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನಿಮ್ಮ ಆದ್ಯತೆ ಪಟ್ಟಿ ಮಾಡಿ ಎಲ್ಲದಕ್ಕೂ ಸಮಯ ಹೊಂದಿಸಿ ಎಲ್ಲಾ ಕಾರ್ಯಗಳನ್ನು ಯೋಜಿತವಾಗಿ ಮಾಡಬೇಕು, ಸಮಯ ವ್ಯರ್ಥ ಮಾಡದೆ ಸೋಮಾರಿತನವಿಲ್ಲದೆ, ನಿಖರತೆಯಿಂದ ಕಾರ್ಯ ನಿರ್ವಹಿಸಬೇಕು, ನಿಮ್ಮ ಬಗ್ಗೆ ನಿಮಗೆ ವಿಶ್ವಾಸವಿರಬೇಕು, ಸೋಲು ಯಶಸ್ಸಿನ ಗುಟ್ಟು, ನಿಮ್ಮ ಎಲ್ಲಾ ಜ್ಞಾನ, ಸಾಧನೆಯನ್ನು ಸಮಾಜದ ಒಳಿತಿಗಾಗಿ, ಉದ್ಧಾರಕ್ಕಾಗಿ ಉಪಯೋಗಿಸಬೇಕು, ಅವಕಾಶಗಳು ಬಾಗಿಲು ತೆರೆದಾಗ ರಾಕೆಟ್ ಹಾಗೆ ಮುನ್ನುಗ್ಗಬೇಕು, ಇಚ್ಛಾಶಕ್ತಿಯಿದ್ದಲ್ಲಿ ಒಂದಲ್ಲ ಹಲವಾರು ದಾರಿಗಳಿರುತ್ತವೆ, ಸಂಕಲ್ಪ, ಶಿಸ್ತು, ಸೇವೆಯಿಂದ ಜೀವನ ಸಾರ್ಥಕತೆ ಪಡೆಯುತ್ತದೆ ಎಂದರು.

ಆಂಧ್ರಪ್ರದೇಶದ ನೆಲ್ಲೂರಿನ ರಾಮಕೃಷ್ಣ ಮಿಷನ್ ನ ಕಾರ್ಯದರ್ಶಿ ಸ್ವಾಮಿ ಹೃದಾನಂದಜೀ ಮಹಾರಾಜ್ ಮಾತನಾಡಿ, ವಿದ್ಯಾರ್ಥಿಗಳು ಆತ್ಮಶಕ್ತಿ, ಧೀಶಕ್ತಿ, ಕ್ರಿಯಾಶಕ್ತಿ ಜಾಗೃತಗೊಳಿಸಿಕೊಂಡು ಬೆಳೆಸಿಕೊಳ್ಳಬೇಕು, ಆಗ ಸಮಸ್ಯೆ ಎದುರಿಸುವ ಶಕ್ತಿ ದೊರೆಯುತ್ತದೆ, ಆತ್ಮವಿಶ್ವಾಸವುಳ್ಳ ವ್ಯಕ್ತಿಎಂತಹ ಸ್ಥಳ, ಸಂದರ್ಭದಲ್ಲಿದ್ದರೂ ಕಾರ್ಯ ಸಾಧನೆಯಲ್ಲಿ ಖಂಡಿತಾ ಯಶಸ್ವಿಯಾಗುತ್ತಾನೆ, ಸ್ವಾಮಿ ವಿವೇಕಾನಂದರು ಆತ್ಮತತ್ವವನ್ನುಜಗತ್ತಿಗೆ ಬೋಧಿಸಿದರು, ಆತ್ಮವಿಶ್ವಾವಿಲ್ಲದವನು ನಾಸ್ತಿಕ, ನಿಮ್ಮಲ್ಲಿ ಅನಂತಶಕ್ತಿಯಿದೆ ಎಂಬುದರಲ್ಲಿ ವಿಶ್ವಾಸವಿಟ್ಟು ಮುನ್ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ತಿನ ರಾಜ್ಯಾಧ್ಯಕ್ಷ ಮೈಸೂರಿನ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಮಾತನಾಡಿ, ಜ್ಞಾನ, ಭಕ್ತಿ, ಶ್ರದ್ಧೆಯ ಪಾಕ ಈ ಯುವ ಸಮ್ಮೇಳನ, ರಾಷ್ಟ್ರ ಪರಿವರ್ತನೆಯಲ್ಲಿ ಯುವಕರ ಪಾತ್ರ ಅನಿವಾರ್ಯ, ಮಕ್ಕಳು, ಯುವಕರಿಗೆ ಸ್ಫೂರ್ತಿ, ಮಾರ್ಗದರ್ಶನ ನೀಡುವುದು ಗೃಹಸ್ಥರ ಆದ್ಯ ಕರ್ತವ್ಯ, ಆಧ್ಯಾತ್ಮ, ಸತ್ಯಶೋಧನೆ, ಬುದ್ಧಿ ವಿಕಾಸದಿಂದ ಜ್ಞಾನಧಾರಣೆ ಇವುಗಳು ಕುಟುಂಬ ಜೀವನದಲ್ಲಿ ಹಾಸು ಹೊಕ್ಕಾಗಿರಬೇಕು, ಶ್ರೀರಾಮಕೃಷ್ಣ ವಿವೇಕಾನಂದರ ಜೀವನ ಸಂದೇಶಗಳ ಅಧ್ಯಯನದಿಂದ ಹೊಸ ಜೀವನ ನಮ್ಮದಾಗುತ್ತದೆ ಎಂದರು.

ಗದಗ-ವಿಜಯಪುರ ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಆಶೀರ್ವಚನ ನೀಡುತ್ತಾ, ಶಿಕ್ಷಿತರಿಗೆ ಮರುಶಿಕ್ಷಣ ನೀಡಿ ಸ್ವಾತಂತ್ರ್ಯದ ಜವಾಬ್ದಾರಿ ಹೊರಲು ಸಾಮರ್ಥ್ಯಶೀಲರನ್ನಾಗಿ ಮಾಡಬೇಕಿರುವುದು ಇಂದಿನ ಅವಶ್ಯಕತೆ, ಯುವಕರಲ್ಲಿ ಧೈರ್ಯ, ಸ್ಥೈರ್ಯ ತುಂಬಿ ಗುರಿಯನ್ನು ಸ್ಪಷ್ಟಪಡಿಸುವ ಕಾರ್ಯಕ್ರಮಗಳೇ ಯುವ ಸಮ್ಮೇಳನಗಳು, ನಮ್ಮ ಶಕ್ತಿಯನ್ನು ನಾವು ಅರಿಯುವುದರ ಜೊತೆಗೆ ಯಾರಿಗೂ ಎರಡನೆಯವರಾಗಿರದೆ ನಾನು ಭಾರತೀಯ ಎಂಬ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದರು.
ಮಾದಿಹಳ್ಳಿ ರಾಮಕೃಷ್ಣ ಮಿಷನ್ ನ ಕಾರ್ಯದರ್ಶಿ ಸ್ವಾಮಿ ಮಂಗಳ ನಾಥಾನಂದಜೀ, ಬೆಂಗಳೂರಿನ ಭವ ತಾರಿಣಿ ಆಶ್ರಮದ ಅಧ್ಯಕ್ಷರಾದ ಮಾತಾಜಿ ವಿವೇಕಮಯಿ, ಬೆಂಗಳೂರಿನ ಖ್ಯಾತ ವಾಗ್ಮಿ ಹಾಗೂ ಅಂಕಣಕಾರ ಸೂಲಿಬೆಲೆ ಚಕ್ರವರ್ತಿ, ಶಾಸಕ ಜ್ಯೋತಿಗಣೇಶ್, ಉಪನ್ಯಾಸಕಿ ಅಕ್ಷಯಾ ಗೋಖಲೆ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!