ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನ ನಿವೇಶನ ರಹಿತರಿಗೆ ವಿವಿಧ ವಸತಿ ಯೋಜನೆಗಳಡಿ 2,800 ನಿವೇಶನಗಳ ವಿತರಣೆ ಮಾಡಲು ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ತಿಳಿಸಿದರು.
ಪಾವಗಡ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲ್ಲೂಕಿನಲ್ಲಿ ನೀವೇಶನ ರಹಿತರಿಗೆ ನಿವೇಶನ ವಿತರಣೆ ಮಾಡಲು ಸುಮಾರು 189 ಎಕರೆ ಪ್ರದೇಶ ಗುರುತಿಸಲಾಗಿದ್ದು, ಈಗಾಗಲೇ ವಿತರಣೆ ಮಾಡಲು ಉದ್ದೇಶಿತ ನಿವೇಶನಗಳನ್ನು ಸಮತಳ ಮಾಡಿಸಲಾಗಿದೆ ಎಂದರು.
ನಿವೇಶನ ವಿತರಣೆ ಪಾರದರ್ಶಕತೆಯಿಂದ ಕೂಡಿರಬೇಕು, ಅರ್ಹ ಫಲಾನುಭವಿಗಳಿಗೆ ಮಾತ್ರ ನಿವೇಶನ ಹಂಚಿಕೆಯಾಗಬೇಕು ಎಂದರಲ್ಲದೆ, ತಾಲ್ಲೂಕಿನಲ್ಲಿ ಕೈಗೊಂಡಿರುವ ಜಲಜೀವನ್ ಮಿಷನ್ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು, ಕಾಮಗಾರಿಗಳಲ್ಲಿ ಲೋಪ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಸಂಜೀವಪ್ಪ, ಮುಖ್ಯ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಜಾನಕೀರಾಮ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಸಿಬ್ಬಂದಿ ಸಭೆಯಲ್ಲಿ ಭಾಗವಹಿಸಿದ್ದರು.
Comments are closed.