ನಿವೃತ್ತ ನೌಕರರು ಹಕ್ಕುಗಳಿಗೆ ಹೋರಾಟ ಅನಿವಾರ್ಯ

9

Get real time updates directly on you device, subscribe now.


ತುಮಕೂರು: ಇಪಿಎಸ್-95 ಪಿಂಚಿಣಿದಾರರ ಸಮಸ್ಯೆಗಳ ಕುರಿತು ಪ್ರಧಾನಿ ಮತ್ತು ವಿತ್ತ ಸಚಿವರ ಜೊತೆ ಎರಡರೆಡು ಬಾರಿ ಚರ್ಚೆ ನಡೆಸಿದ್ದು, ಸುಪ್ರಿಂ ಕೋರ್ಟ್ನ ಆದೇಶದಂತೆ ಕನಿಷ್ಠ 7500 ರೂ. ಮಾಸಿಕ ಪಿಂಚಿಣಿ ನೀಡುವ ಭರವಸೆ ನೀಡಿದ್ದಾರೆ, ಒಂದು ವೇಳೆ ಸರಕಾರ ಮಾತಿಗೆ ತಪ್ಪಿದರೆ, ದೇಶದ 78 ಲಕ್ಷ ನಿವೃತ್ತ ನೌಕರರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವುದು ಅನಿವಾರ್ಯವಾಗಲಿದೆ ಎಂದು ಎನ್ ಎಸಿ ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ತಿಳಿಸಿದ್ದಾರೆ.
ನಗರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ತುಮಕೂರು ವಿಭಾಗ, ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಟ್ರಸ್ಟ್ ವತಿಯಿಂದ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಟ್ರಸ್ಟ್ ಗೆ ಚಾಲನೆ ನೀಡಿ ಮಾತನಾಡಿ, ತಮ್ಮ ಜೀವಿತಾವಧಿಯನ್ನು ಜನರ ಸೇವೆಗೆ ಮುಡಿಪಾಗಿಟ್ಟಿರುವ ನಾವುಗಳು ಮಾಸಿಕ 800 ರೂ. ಗಳಿಂದ 1800 ವರೆಗೆ ಮಾತ್ರ ಪಿಂಚಿಣಿ ಪಡೆಯುತ್ತಿದ್ದು, ಇಂದಿನ ಬೆಲೆ ಹೆಚ್ಚಳದಲ್ಲಿ ಯಾವುದಕ್ಕೂ ಸಾಲದಾಗಿದೆ, ಹಾಗಾಗಿ ಸುಪ್ರಿಂಕೋರ್ಟ್ನ ಆದೇಶದಂತೆ ಕನಿಷ್ಠ ಮಾಸಿಕ 7500 ರೂ. ಪಿಂಚಿಣಿ ಮತ್ತು ಡಿಎ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ನಮ್ಮ ನಿಗಮದಲ್ಲಿ ನಿವೃತ್ತ ನೌಕರರಿಗೆ ವೇತನ ನೀಡುವುದಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ, ನಿವೃತ್ತ ನೌಕರರು ತಮ್ಮ ದುಃಖ ದುಮ್ಮಾನ ಹೇಳಿಕೊಳ್ಳಲು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಸ್ಥಾಪಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ, ಎನ್ ಎ ಎಸ್ ಜೊತೆ ಕೈಜೋಡಿಸಿ ನಿಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದೀರಿ, ಹಿಂಜರಿಕೆ ಬಿಟ್ಟು ಬೇಡಿಕೆಗಳ ಈಡೇರಿಕೆಗೆ ಮುಂದಾಗಿ ಎಂದರು.

ಎನ್ಎಸಿ ಕರ್ನಾಟಕ ಅಧ್ಯಕ್ಷ ಜಿ.ಎಸ್.ಎಂ. ಸ್ವಾಮಿ ಮಾತನಾಡಿ, ಎನ್ ಎಸಿ ದೇಶದ 19ಕ್ಕು ಹೆಚ್ಚು ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದು, ಪ್ರಧಾನಿ, ವಿತ್ತ ಸಚಿವರನ್ನು ಭೇಟಿ ಮಾಡಿ ನಿವೃತ್ತ ನೌಕರರ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗಿದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಜಾರಿಗೆ ಬಂದ ಇಪಿಎಸ್ -95 ಯೋಜನೆ ಪರಿಷ್ಕರಿಸಿ ಸುಪ್ರಿಂ ಕೋರ್ಟ್ನ ನಿರ್ದೇಶನದಂತೆ ಕನಿಷ್ಠ 7500 ರೂ. ಮಾಸಿಕ ಪಿಂಚಿಣಿ ನೀಡಬೇಕೆಂದು ಕಳೆದ 6 ವರ್ಷಗಳಿಂದ ಸತ್ಯಾಗ್ರಹ ನಡೆಸಲಾಗುತ್ತಿದೆ, ಶೀಘ್ರದಲ್ಲಿಯೇ ನಮಗೆ ಒಳ್ಳೆಯ ಸುದ್ದಿ ಬರಲಿದೆ ಎಂಬ ವಿಶ್ವಾಸವಿದೆ, ನಿವೃತ್ತ ನೌಕರರು ಎನ್ ಎಸಿಗೆ ಸದಸ್ಯರಾಗುವ ಮೂಲಕ ನಮ್ಮ ಸಂಘಟನೆ ಬಲಪಡಿಸಬೇಕೆಂದರು.

ಎನ್ಎಸಿಯ ಮಹಿಳಾ ಘಟಕದ ಅಧ್ಯಕ್ಷೆ ಶೋಬಾ ಅರಸ್, ಮುಖಂಡರಾದ ಸರೀತಾ ನಾರ್ಕೇಡ್, ಕಾನೂನು ಸಲಹೆಗಾರ ನಂಜುಂಡೇಗೌಡ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿದರು, ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ನ ಅಧ್ಯಕ್ಷ ಭೀಮಾನಾಯಕ್, ಎನ್ ಎಸಿ ಮತ್ತು ಇಪಿಎಸ್- 95 ನ ಜಿಲ್ಲಾಧ್ಯಕ್ಷ ದೊಡ್ಡೇಗೌಡ.ಎಂ.ಎಲ್, ಉಮೇಶ್, ತುಳಿಸಿರಾಮ್, ನಾಗರಾಜು, ಎಂ.ಷಡಕ್ಷರಿ, ಶಿವಶಂಕರ್, ಉಮೇಶ್ ಕುಮಾರ್, ರಾಜಗೋಪಾಲ್, ರಾಜಶೇಖರ್, ಎಂ.ಎಸ್.ವೆಂಕಟನಾರಾಯಣ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!