ಕುಣಿಗಲ್: ತಾಲೂಕಿನ ಚಿಕ್ಕಕೆರೆಗೆ ಹೇಮಾವತಿ ನೀರು ಹರಿಸುವಂತೆ ಆಗ್ರಹಿಸಿ ಚಿಕ್ಕಕೆರೆ ಅಚ್ಚುಕಟ್ಟು ಪ್ರದೇಶದ ಸುತ್ತಮುತ್ತಲ ಗ್ರಾಮಗಳ ರೈತರು ಪಟ್ಟಣದ ಹೇಮಾವತಿ ನಾಲಾ ಕಚೇರಿಗೆ ಸೋಮವಾರ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು.
ಚಿಕ್ಕಕೆರೆ ಸುತ್ತಮುತ್ತಲ ಗ್ರಾಮಗಳಾದ ಕೊತ್ತಿಪುರ, ಹನುಮಾಪುರ, ಶೆಟ್ಟಿಗೆಹಳ್ಳಿ, ಹೇರೂರು, ಲಾಳಾಪುರ, ಮುದ್ದಹನುಮನ ಪಾಳ್ಯ, ಗಾಳಿ ಹನುಮನ ಪಾಳ್ಯ ಇತರೆ ಗ್ರಾಮಗಳ ರೈತರು ಪಟ್ಟಣದ ಹೊರ ವಲಯದಲ್ಲಿನ ಹೇಮಾವತಿ ನಾಲಾ ವಲಯದ ಕಚೇರಿಗೆ ಮುಖಂಡ ಶಿವರಾಮ, ರಂಗನಾಥ ಇತರರ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಬೇಗೂರು ಕೆರೆಯ ಮೂಲಕ ಚಿಕ್ಕಕೆರೆಗೆ ಹೇಮಾವತಿ ನೀರು ಹರಿಸ ಬೇಕೆಂದು ಒತ್ತಾಯಿಸಿದರು.
ಈವೇಳೆ ಮಾತನಾಡಿದ ರೈತರು ಈಹಿಂದೆ ಬೇಗೂರು ಕೆರೆ ತುಂಬಿ ಕೋಡಿಯಾಗಿದ್ದಾಗ ಬೇಗೂರು ಕೆರೆಗೆ ಹೊಂದಿಕೊಂಡಂತಹ ಜಮೀನಿನಲ್ಲಿ ನೀರು ನಿಂತ ಕಾರಣ ಆ ಜಮೀನಿನ ರೈತರು ಬೆಳೆ ಕೊಯ್ಲು ಮಾಡುವ ತನಕ ಬೇಗೂರು ಕೆರೆಗೆ ಹರಿಯುವ ನೀರು ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು.
ಈ ಭಾಗದ ರೈತರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿ ಬೆಳೆ ಕಟಾವಿಗೆ ಅನುವು ಮಾಡಿಕೊಟ್ಟಿದ್ದರು, ಬೇಗೂರು ಕೆರೆಯ ಅಂಚಿನಲ್ಲಿರುವ ರೈತರು ಬೆಳೆ ಕಟಾವು ಮಾಡಿದ್ದು, ಇದೀಗ ಬೇಗೂರು ಕೆರೆಯ ಮೂಲಕ ಹೇಮಾವತಿ ನೀರು ಚಿಕ್ಕಕೆರೆಗೆ ಹರಿಸುವಂತೆ ಕಳೆದೊಂದು ವಾರದಿಂದ ನಾಲಾ ವಲಯದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ನಾಲಾ ವಲಯದ ಅಧಿಕಾರಿಗಳು ತಹಶೀಲ್ದಾರ್ ಸೇರಿದಂತೆ ಅವರ ಇವರ ಮೇಲೆ ಸಬೂಬು ಹೇಳಿಕೊಂಡು ನೀರು ಹರಿಸುತ್ತಿಲ್ಲ, ರೈತರಿಗಾಗಿಯೇ ನೀರಾವರಿ ಯೋಜನೆ ಅನುಷ್ಠಾನ ಮಾಡಿರುವ ಸರ್ಕಾರ ಇದೀಗ ಹೇಮಾವತಿ ನೀರು ಈಭಾಗಕ್ಕೆ ಹರಿಯುತ್ತಿದ್ದರೂ ಅದನ್ನು ರೈತರ ಕೆರೆಗಳಿಗೆ ಬಿಡದೆ ಹೊಳೆಯ ಮೂಲಕ ಸಮುದ್ರ ಸೇರುವಂತೆ ಮಾಡುತ್ತಿದ್ದಾರೆ, ನಾಲಾ ವಲಯದ ಅಧಿಕಾರಿಗಳು ರೈತರ ಸಮಸ್ಯೆ ಅರ್ಥ ಮಾಡಿಕೊಂಡು ಚಿಕ್ಕಕೆರೆ ಸುತ್ತಮುತ್ತಲ ಕೆರೆಗೆ ನೀರು ಹರಿಸುವುದು ಬಿಟ್ಟು ಕೇವಲ ಕೆಲವೇ ಮಂದಿ ರಾಜಕಾರಣಿಗಳ ಮಾತು ಕೇಳಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆ, ಸರ್ಕಾರದ ಅಧಿಕಾರಿಗಳಾಗಿ ಹೇಮಾವತಿ ನೀರಿದ್ದರೂ ನಮಗೆ ನೀಡದೆ ಇರುವುದು ಖಂಡನೀಯ, ಕೂಡಲೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನೀರು ಬಿಡುವವರೆಗೂ ಅಧಿಕಾರಿಗಳನ್ನು ಕೂಡಿಹಾಕಿ ಇಲ್ಲಿಯೇ ಪ್ರತಿಭಟನೆ ಮುಂದುವರೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರೊಂದಿಗೆ ಮಾತನಾಡಿ ಸಹಾಯಕ ಅಭಿಯಂತರ ನಂದೀಶ್, ಕುಣಿಗಲ್ ತಾಲೂಕಿನ ಚಿಕ್ಕಕೆರೆಯು ಕುಣಿಗಲ್ ಉಪ ವಿಭಾಗದ ನಾಲಾ ವಲಯಕ್ಕೆ ಬರುತ್ತದೆ, ಆದರೆ ಹೇಮಾವತಿ ನಾಲೆಯಲ್ಲಿ ನೀರು ಹರಿಸಬೇಕಿದ್ದು 180ನೇ ಕಿ.ಮೀ ಯಿಂದ 207 ಕಿ.ಮೀ ವ್ಯಾಪ್ತಿಯು ನಾಗವಲ್ಲಿ ಉಪವಿಭಾಗಕ್ಕೆ ಬರುತ್ತದೆ, ಅವರು ನೀರು ಬಿಡಲು ಕ್ರಮ ಕೈಗೊಳ್ಳಬೇಕು, ಈಗಾಗಲೆ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ, ಅವರು ನೀರು ಬಿಟ್ಟ ಕೂಡಲೆ ಚಿಕ್ಕಕೆರೆ ಕಡೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರತಿಭಟನಾ ನಿರತ ರೈತರು ಬುಧವಾರ ಬೆಳಗ್ಗೆವರೆಗೂ ಸಮಯವಕಾಶ ನೀಡುತ್ತೇವೆ, ಅದರೊಳಗೆ ಹೇಮಾವತಿ ನೀರು ಚಿಕ್ಕಕೆರೆಗೆ ಹರಿಸಲು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಬುಧವಾರ ಜಾನುವಾರುಗಳೊಂದಿಗೆ ನಾಲಾ ವಲಯದ ಕಚೇರಿಗೆ ಮುತ್ತಿಗೆ ಹಾಕಿ ನೀರು ಹರಿಸುವವರೆಗೂ ಅಹೋರಾತ್ರಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿ ಕುಣಿಗಲ್ ವಲಯದ ನಾಲಾವಲಯದ ಅಧಿಕಾರಿಗಳಿಗೆ ಮನವಿ ನೀಡಿದ ನಂತರ ತಹಶೀಲ್ದಾರ್ ಅವರಿಗೂ ಮನವಿ ನೀಡಿದರು.
ಪ್ರತಿಭಟನೆಯಲ್ಲಿ ದಾಸೇಗೌಡ, ಈಶ್ವರ, ಚಂದ್ರಶೇಖರ್, ದೇವರಾಜ, ಯೋಗಿ, ರವಿಕುಮಾರ್, ಗಿರೀಶ, ಮಂಜುನಾಥ, ಭೈರೇಶ, ಅಭಿಷೇಕ, ಕಾರ್ತೀಕ್ ಇತರರು ಇದ್ದರು.
Comments are closed.