ತುಮಕೂರು: ತುಮಕೂರು ವಿಶ್ವ ವಿದ್ಯಾಲಯ ಆಂಧ್ರ ಪ್ರದೇಶದ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವಿಜ್ಞಾನ್ ವಿಶ್ವ ವಿದ್ಯಾಲಯದೊಂದಿಗೆ ಶೈಕ್ಷಣಿಕ ಒಡಂಬಡಿಕೆಗೆ ಸಹಿ ಹಾಕಿದೆ.
ತುಮಕೂರು ವಿವಿಯ ಕುಲಸಚಿವೆ ನಾಹಿದಾ ಜಮ್ ಜಮ್ ಹಾಗೂ ವಿಜ್ಞಾನ್ ವಿವಿಯ ಕುಲಸಚಿವ ಪ್ರೊ.ನಾಗಭೂಷಣ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ವಿಜ್ಞಾನ್ ವಿವಿಯ ಡೀನ್ ಪ್ರೊ.ರಾಮಾರಾವ್, ಕೈಗಾರಿಕೋದ್ಯಮಿ ಡಾ.ಎಚ್.ಜಿ.ಚಂದ್ರಶೇಖರ್ ಉಪಸ್ಥಿತರಿದ್ದರು.
ಈ ಒಡಂಬಡಿಕೆಯ ಪ್ರಕಾರ, ಶಿಕ್ಷಣ ಹಾಗೂ ಸಂಶೋಧನೆಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಪರಸ್ಪರ ಸಹಯೋಗದಲ್ಲಿ ನಡೆಸುವ ಉದ್ದೇಶ ಹೊಂದಲಾಗಿದೆ, ಬಹುಶಿಸ್ತಿನ ಶಿಕ್ಷಣ, ಸಂಶೋಧನೆ, ಪಠ್ಯಕ್ರಮ ವಿನ್ಯಾಸ ಮತ್ತು ಪರಿಷ್ಕರಣೆ, ಮೂಲ ಸೌಕರ್ಯ ಒದಗಿಸುವುದು, ಜಂಟಿ ಪ್ರಕಟಣೆಗಳು, ಪೇಟೆಂಟ್ ಗಳು, ಯೋಜನೆಗಳನ್ನು ರೂಪಿಸಿವುದು, ಎರಡೂ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಪ್ರಾಯೋಗಿಕ ತರಬೇತಿ ಒದಗಿಸುವುದು, ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ಮತ್ತು ಇಂಟರ್ನ್ಶಿಪ್ ಗೆ ಮಾರ್ಗದರ್ಶನ ಹಾಗೂ ಸಹಕಾರ, ಸಂಶೋಧನಾ ಕಾರ್ಯಕ್ಕಾಗಿ ಪ್ರಯೋಗಾಲಯ ಸೌಲಭ್ಯ, ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸುವುದು ಒಡಂಬಡಿಕೆಯ ಭಾಗವಾಗಿದೆ.
ಹಾಗೆಯೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮ್ಮೇಳನಗಳು, ಸೆಮಿನಾರ್ ಗಳು, ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಸಾಮಾಜಿಕ ಸಂಬಂಧಿತ ಕಾರ್ಯಕ್ರಮಗಳನ್ನು ಆಯಾ ಸಂಸ್ಥೆಯ ಮಾನದಂಡಗಳ ಪ್ರಕಾರ ಜಂಟಿಯಾಗಿ ಆಯೋಜಿಸಲು ಪರಸ್ಪರ ಬೆಂಬಲ ನೀಡಲು ಈ ಒಡಂಬಡಿಕೆ ಸಹಕಾರಿಯಾಗಿದೆ.
Comments are closed.