ಗುಬ್ಬಿ: ಹೇಮಾವತಿ ನೀರು ಕಲ್ಪತರು ನಾಡಿನ ಜೀವನಾಡಿಯಾಗಿದ್ದು ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ, ಹಾಗಾಗಿ ಯಾವುದೇ ಕಾರಣಕ್ಕೂ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಚನ್ನೇನಹಳ್ಳಿ ಹುಲ್ಲೆಕೆರೆ ಗ್ರಾಮದಲ್ಲಿ ಮನೆ ಮನೆಗೆ ಗಂಗೆ ಜಲ ಜೀವನ್ ಮಿಷನ್ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಜಿಲ್ಲೆಯ ಎನ್ ಡಿಎ ಶಾಸಕರು ವಿಧಾನಸಭೆಯಲ್ಲಿ ಸಾಕಷ್ಟು ಬಾರಿ ಲಿಂಕ್ ಕೆನಾಲ್ ಬಗ್ಗೆ ಚರ್ಚೆ ಮಾಡಿದರು ಕಾಂಗ್ರೆಸ್ ಸರ್ಕಾರ ಇತ್ತ ಕಿವಿಗೊಡದೆ ಮೊಂಡುತನ ತೋರುತ್ತಿದೆ, ಇದು ಕನಕಪುರವಲ್ಲ ತುಮಕೂರು ಜಿಲ್ಲೆ ಎಂಬ ಅರಿವು ಸರ್ಕಾರಕ್ಕೆ ಇರಲಿ ಎಂದರು.
ಕಾಂಗ್ರೆಸ್ ಸರ್ಕಾರವು ಅತ್ಯಂತ ದುರ್ಬಲ ಸರ್ಕಾರವಾಗಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿಲ್ಲ, ಅನುದಾನ ನೀಡಿದರೆ ಅಭಿವೃದ್ಧಿ ಕೆಲಸ ಮಾಡಲು ಅನುಕೂಲವಾಗುತ್ತದೆ, ಇನ್ನೂ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜೆಜೆಎಂ ಯೋಜನೆಯು ಗ್ರಾಮೀಣ ಜನರಿಗೆ ಉಪಯುಕ್ತವಾಗಲೆಂದು ರೂಪಿಸಿದ್ದು ಈ ಯೋಜನೆಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ಮಾಡದೆ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಿ ಬೇಸಿಗೆ ಹತ್ತಿರ ಬರುತ್ತಿರುವುದರಿಂದ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹೋಬಳಿ ಅಧ್ಯಕ್ಷ ಜಗದೀಶ್, ನವೀನ್ ಕುಮಾರ್, ನರಸೇಗೌಡ, ಚನ್ನೇನಹಳ್ಳಿ ನರಸಿಂಹಮೂರ್ತಿ, ರಾಮು, ಇಡಗೂರು ತಮ್ಮಯಣ್ಣ, ನಂಜೇಗೌಡ, ಸೋಮಣ್ಣ, ಬೋರಪ್ಪನಹಳ್ಳಿ ಕುಮಾರ್ ಸೇರಿದಂತೆ ಜೆಡಿಎಸ್ ಮುಖಂಡರು ಹಾಜರಿದ್ದರು.
Comments are closed.