ದಲಿತ ಕಾಲೋನಿಗಳಲ್ಲಿ ಕಾನೂನು ಅರಿವು ಮೂಡಿಸಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ

9

Get real time updates directly on you device, subscribe now.


ತುಮಕೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸರಕಾರದಿಂದ ನೀಡುವ ಸೌಲಭ್ಯ ಹಾಗೂ ಕಾನೂನು ಸೇವೆಗಳ ಬಗ್ಗೆ ದಲಿತ ಕಾಲೋನಿಗಳಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಪ.ಜಾತಿ ಮತ್ತು ಪ.ಪಂಗಡದವರಿಗೆ ನೀಡಲಾಗುತ್ತಿರುವ ಸವಲತ್ತುಗಳ ಬಗೆಗಿನ ಮಾಹಿತಿ ಕೊರತೆಯಿಂದ ಅನೇಕರು ಸೌಲಭ್ಯ ವಂಚಿತರಾಗುತ್ತಿದ್ದು, ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕಾರ್ಮಿಕ ನೀತಿಗೆ ವಿರೋಧವಾಗಿ ಕೆಲವು ಕೈಗಾರಿಕೆಗಳಲ್ಲಿ ಸಮಯ ಮೀರಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಸಮಿತಿ ಸದಸ್ಯರು ಆರೋಪಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕೈಗಾರಿಕೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚನೆ ನೀಡಿದರು.
ಪ.ಜಾತಿ ಮತ್ತು ಪ.ಪಂಗಡದವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಲಾದ ಕೊಳವೆ ಬಾವಿಗಳಲ್ಲಿ ನೀರು ಸಿಗದೆ ಹೋದರೂ ಪೈಪ್ ಗಳು, ಮೋಟಾರ್ ಪಂಪ್ ಸೇರಿದಂತೆ ವಿದ್ಯುತ್ ಪರಿವರ್ತಕಗಳನ್ನು ರೈತರಿಗೆ ನೀಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸುತ್ತಿರುವ ದೂರಿನ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಆಶ್ರಯ ಯೋಜನೆಯಡಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಅಗತ್ಯ ಸಿದ್ಧತೆಗಳನ್ನು ಈಗಾಗಲೇ ನಡೆಸಲಾಗಿದ್ದು, ಆಯಾ ತಾಲ್ಲೂಕಿನ ತಹಶೀಲ್ದಾರ್ ಮತ್ತು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು, ಫಲಾನುಭವಿ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿ ಅರ್ಹರಿಗೆ ನಿವೇಶನಗಳನ್ನು ದೊರಕಿಸಿಕೊಡಲಾಗುವುದು, ಪ.ಜಾತಿ ಮತ್ತು ಪ.ಪಂಗಡದವರಿಗೆ ಮೀಸಲಾತಿ ಆಧಾರದ ಮೇಲೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಪ.ಜಾತಿ ಮತ್ತು ಪ.ಪಂಗಡದವರ ಇನಾಂ ಜಮೀನುಗಳ ಉಳುಮೆಗೆ ಸಂಭಂದಪಟ್ಟಂತೆ ಬಿತ್ತನೆ ಬೀಜ ಹಾಗೂ ಕೃಷಿ ಸಲಕರಣೆಗಳನ್ನು ಕೃಷಿ ಇಲಾಖೆಯಿಂದ ನೀಡದಿರುವುದನ್ನು ಪ್ರಶ್ನಿಸಿದ ಸಮಿತಿ ಸದಸ್ಯರ ಪ್ರಶ್ನೆಗೆ ಜಂಟಿ ಕೃಷಿ ನಿರ್ದೇಶಕ ರಮೇಶ್ ಉತ್ತರಿಸಿ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಹಾಗೂ ಕೃಷಿ ಸಲಕರಣೆ ಪಡೆಯಲು ಫಲಾನುಭವಿಗಳು ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯವಾಗಿದ್ದು, ಪ.ಜಾತಿ ಮತ್ತು ಪ.ಪಂಗಡದವರ ಇನಾಂ ಜಮೀನುಗಳಿಗೆ ಸಹಾಯಧನ ಆಧಾರದಲ್ಲಿ ಬಿತ್ತನೆ ಬೀಜ ಹಾಗೂ ಕೃಷಿ ಸಲಕರಣೆ ನೀಡಲು ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಉಪ ವಿಭಾಗಾಧಿಕಾರಿಗಳಾದ ಗೋಟೂರು ಶಿವಪ್ಪ, ಸಪ್ತಶ್ರೀ, ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!