ಕುಣಿಗಲ್: ನವಜಾತ ಶಿಶುವಿನ ಸಾವಿಗೆ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ನೀಡಿದ್ದ ಲಸಿಕೆ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಆರೋಗ್ಯ ಕೇಂದ್ರದ ಸಿಬ್ಬಂದಿ ಫಲಾಯನ ಮಾಡಿದ್ದು ಪೊಲೀಸರ ಸಕಾಲಿಕ ಕ್ರಮದಿಂದ ಪ್ರತಿಭಟನೆ ನಿಯಂತ್ರಣಕ್ಕೆ ಬಂದ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಭಕ್ತರಹಳ್ಳಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿನ ಸಿಂಗೋನಹಳ್ಳಿ ಗ್ರಾಮದ ಮುರುಳಿ ಮೋಹನ್, ಚೈತ್ರ ದಂಪತಿಯ ಎರಡುವರೆ ತಿಂಗಳ ಗಂಡು ಮಗುವಿಗೆ ಗುರುವಾರ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ಅಂಗವಾಗಿ ಲಸಿಕೆ ನೀಡಲಾಗಿತ್ತು, ಗುರುವಾರ ಲಸಿಕೆ ಪಡೆದ ನಂತರ ಮನೆಗೆ ತೆರಳಿದ್ದ ಮಗುವಿಗೆ ರಾತ್ರಿ ಏಕಾಏಕಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಸ್ಥಳೀಯ ಆರೋಗ್ಯ ಕಾರ್ಯಕರ್ತರನ್ನು ಕೇಳಿದಾಗ ಚಿಕಿತ್ಸೆಗೆ ಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದು, ಶಿಶುವನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಾಗ ಮೃತಪಟ್ಟಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ಶುಕ್ರವಾರ ಬೆಳಗ್ಗೆ ಶಿಶುವಿನ ಸಾವಿಗೆ ಲಸಿಕೆಯೆ ಕಾರಣ ಎಂದು ಆರೋಪಿಸಿ ಪ್ರತಿಭಟನೆಗೆ ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯಕ್ಕೆ ಆಗಮಿಸಿದಾಗ, ಗ್ರಾಮಸ್ಥರ ಆಕ್ರೋಶಕ್ಕೆ ಹೆದರಿದ ಸಿಬ್ಬಂದಿ ಉತ್ತರಿಸಲಾಗದೆ ಫಲಾಯನ ಮಾಡಿದರು ಎನ್ನಲಾಗಿದೆ.
ಪ್ರತಿಭಟನೆ ವಿಷಯ ತಿಳಿದ ಕುಣಿಗಲ್ ಸಿಪಿಐ ನವೀನ್ ಗೌಡ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗ್ರಾಮಸ್ಥರನ್ನು ಸಮಾದಾನ ಪಡಿಸಿ, ಪರಿಸ್ಥಿತಿ ನಿಯಂತ್ರಿಸಿದರು, ಘಟನೆ ಸಂಬಧಿಸಿದಂತೆ ಶಿಶುವಿನ ತಂದೆ, ಲಸಿಕೆ ನೀಡಿದ ನಂತರ ಶಿಶುವಿನ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಶಿಶುವಿನ ಸಾವಿನ ಬಗ್ಗೆ ಅನುಮಾನ ಇದ್ದು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ, ಘಟನೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ, ಲಸಿಕೆ ಯೋಜನೆಯ ನೋಡಲ್ ಅಧಿಕಾರಿ ನಾಗೇಶ್, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು, ಲಸಿಕೆ ಕಾರ್ಯಕ್ರಮಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯಿಂದ ವಿವರಣೆ ಪಡೆದಿದ್ದಾರೆ.
ಈಬಗ್ಗೆ ಪ್ರತಿಕ್ರಿಯೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ, ಎರಡುವರೆ ತಿಂಗಳ ಮಗುವಿಗೆ ನೀಡಲಾಗುವ ರೋಗ ನಿರೋಧಕ ಲಸಿಕೆಯ ಒಂದು ವಯಲ್ ನಿಂದ ಈ ಶಿಶುವಿಗೂ ಸೇರಿದಂತೆ ಐದು ಶಿಶುಗಳಿಗೆ ನೀಡಲಾಗಿದೆ, ಲಸಿಕೆ ನೀಡುವಾಗ ಶಿಶುವಿನ ಆರೋಗ್ಯ ಉತ್ತಮವಾಗಿದ್ದು 3.6 ಕೆಜಿ ತೂಕ ಇತ್ತು, ಲಸಿಕೆ ನೀಡಿ ನಿಯಮದಂತೆ ಒಂದು ಗಂಟೆ ಆಸ್ಪತ್ರೆಯಲ್ಲೆ ಇರಿಸಿಕೊಂಡಿದ್ದು ಯಾವುದೇ ಸಮಸ್ಯೆ ಕಂಡುಬರಲಿಲ್ಲ, ಈ ಮಗುವಿನ ಜೊತೆ ಲಸಿಕೆ ನೀಡಿದ ಬಾಕಿ ಎಲ್ಲಾ ಶಿಶುಗಳು ಆರೋಗ್ಯವಾಗಿವೆ, ಈ ಶಿಶುವಿನ ಸಾವಿನ ಬಗ್ಗೆ ಮುಂದಿನ ಪ್ರಕ್ರಿಯೆ ನಡೆದ ನಂತರ ತಿಳಿಯಲಿದೆ, ಎಲ್ಲಾ ರೀತಿಯಿಂದಲೂ ಪರಿಶೀಲನೆ ನಡೆಸಲಾಗುವುದು, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ, ಮೇಲ್ನೋಟಕ್ಕೆ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿನ ಶವಗಾರದ ಸಮೀಪ ಮೃತ ಶಿಶುವಿನ ಸಂಬಂಧಿಕರು, ತಾಯಿಯ ರೋದನೆ ಮುಗಿಲು ಮುಟ್ಟಿದ್ದು ಕರುಳು ಹಿಂಡುವಂತಿತ್ತು, ನವಜಾತ ಶಿಶು ಕಳೆದುಕೊಂಡ ಕುಟುಂಬದ ಸ್ಥಿತಿ ಕಂಡು ಆಸ್ಪತ್ರೆಗೆ ಆಗಮಿಸಿದ ರೋಗಿಗಳು, ಗ್ರಾಮಸ್ಥರು ಮರುಕ ವ್ಯಕ್ತಪಡಿಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
Comments are closed.