ಕುಣಿಗಲ್ ನಲ್ಲಿ ಮತ್ತೊಂದು ಶಿಶು ಸಾವು

7

Get real time updates directly on you device, subscribe now.


ಕುಣಿಗಲ್: ಲಸಿಕೆಯಿಂದ ನವಜಾತು ಶಿಶು ಮೃತ ಪಟ್ಟಿದ್ದ ಘಟನೆ ಮಾಸುವ ಮುನ್ನವೆ ಮತ್ತೊಂದು ಶಿಶು ಮೃತಪಟ್ಟಿದ್ದು ತಾಲೂಕಿನಾದ್ಯಂತ ಲಸಿಕೆ ಪಡೆದ ಶಿಶುವಿನ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.
ಗುರುವಾರ ತಾಲೂಕಿನ ಕೊತ್ತಗೆರೆ ಹೋಬಳಿಯ ಸಿಂಗೋನಹಳ್ಳಿ ಗ್ರಾಮದ ಚೈತ್ರ ಎಂಬುವರ ಎರಡುವರೆ ತಿಂಗಳ ಗಂಡು ಮಗುವಿಗೆ ಭಕ್ತರಹಳ್ಳಿ ಆರೋಗ್ಯಕೇಂದ್ರದಲ್ಲಿ ಲಸಿಕೆ ನೀಡಿದ್ದು ಗುರುವಾರ ರಾತ್ರಿ ಮಗುವಿನ ಆರೋಗ್ಯದಲ್ಲಿ ವ್ಯತ್ಯಯವಾಗಿ ಶುಕ್ರವಾರ ಬೆಳಗ್ಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ತರುವಾಗ ಮೃತಪಟ್ಟಿದ್ದು ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮೃತನ ಕಡೆಯವರು ಪ್ರತಿಭಟನೆ ನಡೆಸಿ ನ್ಯಾಯಕ್ಕೆ ಆಗ್ರಹಿಸಿದ್ದರು.

ಈ ಘಟನೆ ಮಾಸುವ ಮುನ್ನವೆ ಪಟ್ಟಣದ ಹೊಸ ಬಡಾವಣೆ ವಾಸಿಯಾದ ರಂಜಿತಾ, ವಿನೋದ್ ದಂಪತಿಯ ಎರಡು ತಿಂಗಳ ಹೆಣ್ಣು ಮಗು ಯಶಿಕಾಗೆ ಕೋಟೆ ಪ್ರದೇಶದಲ್ಲಿನ ನಗರ ಆರೋಗ್ಯ ಕೇಂದ್ರದಲ್ಲಿ ಗುರುವಾರ ಲಸಿಕೆ ಹಾಕಿಸಲಾಗಿತ್ತು, ಶುಕ್ರವಾರ ರಾತ್ರಿ ಮಗುವಿಗೆ ವಾಂತಿ ಆರಂಭವಾಗಿದ್ದು ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಮಗುವನ್ನು ಬೆಳ್ಳೂರು ಕ್ರಾಸ್ ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದು ಶನಿವಾರ ಬೆಳಗ್ಗೆ ಮಗು ಮೃತಪಟ್ಟಿದೆ.
ಮಗು ಮೃತಪಟ್ಟ ಘಟನೆ ಪಟ್ಟಣದಲ್ಲಿ ಮಿಂಚಿನಂತೆ ಹರಡಿ ಲಸಿಕೆ ಹಾಕಿಸಿದ ಕುಟುಂಬಗಳಲ್ಲಿ ಆತಂಕ ಉಂಟು ಮಾಡಿದೆ, ಗುರುವಾರ ಲಸಿಕೆ ನೀಡಿದ್ದು ಶುಕ್ರವಾರ ಒಂದು, ಶನಿವಾರ ಒಂದು ಮಗು ಮೃತಪಟ್ಟಿದ್ದು ನಾಗರಿಕರಲ್ಲಿ ಗೊಂದಲ ಉಂಟು ಮಾಡಿದ್ದು ನವಜಾತ ಕಂದಮ್ಮಗಳ ಸಾವಿಗೆ ನಿಖರ ಕಾರಣ ಏನೆಂದು ಗುತ್ತಾಗದೆ ಇರುವುದು ಆರೋಗ್ಯ ಇಲಾಖೆಯ ಲಸಿಕೆ ಮೇಲೆ ಅನುಮಾನ ಮೂಡಿಸುತ್ತಿದೆ ಎಂದು ಮೃತ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

ಶನಿವಾರದ ಘಟನೆ ಹಿನ್ನೆಲೆಯಲ್ಲಿ ನಗರ ಆರೋಗ್ಯಕೇಂದ್ರದ ಸಿಬ್ಬಂದಿ, ಹೊಸ ಬಡಾವಣೆಯ ಮಗುವಿನ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ತಾಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ, ಡಾ.ಮರಿಯಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ ಮಗುವಿನ ಆರೋಗ್ಯದ ಸ್ಥಿತಿಯ ಬಗ್ಗೆ ನಿಗಾವಹಿಸುವಂತೆ ಆಯಾ ವ್ಯಾಪ್ತಿಯ ಆರೋಗ್ಯಕಾರ್ಯಕರ್ತರಿಗೆ ಸೂಚನೆ ನೀಡಿದ್ದು, ಆ ಬಗ್ಗೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಲಸಿಕೀಕರಣದ ನಂತರ ನವಜಾತ ಶಿಶುಗಳು ಮೃತಪಟ್ಟಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ, ಅಲ್ಲದೆ ಲಸಿಕೆ ಪಡೆದಂತಹ ನವಜಾತ ಶಿಶುಗಳ ಆರೋಗ್ಯದ ಬಗ್ಗೆ ನಿರಂತರ ನಿಗಾ ವಹಿಸುವಂತೆ ಆಯಾ ವ್ಯಾಪ್ತಿಯ ಆರೋಗ್ಯಕಾರ್ಯಕರ್ತರಿಗೂ ಸೂಚನೆ ನೀಡಲಾಗಿದೆ ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!