ಗುಬ್ಬಿ: ದಿವಂಗತ ಹಾಸ್ಯ ನಟ ನರಸಿಂಹರಾಜು ಅವರು ಇಂಗ್ಲೆಂಡ್ ದೇಶದಲ್ಲಿ ಏನಾದರೂ ಜನಿಸಿದ್ದರೆ ಹಾಸ್ಯ ನಟನೆಯಲ್ಲಿ ಚಾರ್ಲಿ ಚಾಪ್ಲಿನ್ ಅವರನ್ನೇ ಮೀರಿಸುತ್ತಿದ್ದರು ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ತಿಳಿಸಿದರು.
ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಹಾಸ್ಯ ಬ್ರಹ್ಮ ನರಸಿಂಹರಾಜು ಶತಮಾನೋತ್ಸವ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡ ಚಿತ್ರರಂಗ ಹಾಸ್ಯ ನಟ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಆಚರಿಸದೆ ಇರುವುದು ವಿಪರ್ಯಾಸವೇ ಸರಿ ಎಂದು ಬೇಸರ ವ್ಯಕ್ತಪಡಿಸಿದ್ದರು.
ಜಿ.ವಿ.ಅಯ್ಯರ್, ನರಸಿಂಹರಾಜು, ಬಾಲಕೃಷ್ಣ ಅವರು ಕನ್ನಡ ರಂಗಭೂಮಿಗೆ ಸುಗಮ ಸುಖವಾದ ಉತ್ತಮ ಹಾಸ್ಯ ಸಂಸ್ಕೃತಿ ತಂದುಕೊಟ್ಟವರು, ಪ್ರಸ್ತುತ ದಿನಗಳಲ್ಲಿ ಕಪಿ ಚೇಷ್ಟೆ, ಅಶ್ಲೀಲ ವಿಚಾರ, ಕೆಟ್ಟ ಹಾಸ್ಯ ಸಂಭಾಷಣೆಯನ್ನೆ ಹಾಸ್ಯ ಎಂದುಕೊಂಡಿದ್ದಾರೆ, ಬಿಗ್ ಬಾಸ್ ನಲ್ಲಿ ಮಾಡುವ ಕೆಟ್ಟ ಕುಲಗೆಟ್ಟ ಹಾಸ್ಯ ನೋಡಿದಾಗ, ಈ ದಿನಗಳಲ್ಲಿ ಹಾಸ್ಯನಟ ನರಸಿಂಹರಾಜು ಅವರು ಪ್ರಸ್ತುತ ಎನಿಸುತ್ತಾರೆ ಎಂದರು.
ಬಾಲಕೃಷ್ಣ, ನರಸಿಂಹರಾಜು ಅವರು ಸೃಜನಶೀಲ ಸ್ವಯಂ ಪ್ರತಿಭೆಯಿಂದ ಹಾಸ್ಯ ಮಾಡುತ್ತಿದ್ದರು, ಅಂದಿನ ಸಂದರ್ಭದಲ್ಲಿ ಆ ಪ್ರಸಂಗಗಳಿಗೆ ಅನುಕೂಲವಾಗುವಂತೆ ಹಾಸ್ಯ ಮಾಡುತ್ತಿದ್ದರು, ಇಂದಿನ ಕಥೆಗಳಲ್ಲಿ ಹಾಸ್ಯ ಮಾಡುವುದಕ್ಕೂ ಮೂಲ ಕಥೆಗೂ ಸಂಬಂಧವೇ ಇರುವುದಿಲ್ಲ, ಉತ್ತಮ ಹಾಸ್ಯದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಸಿರಿವರ ಮಾತನಾಡಿ, ದಿವಂಗತ ನರಸಿಂಹರಾಜು ಅವರು ಕನ್ನಡ ಚಿತ್ರರಂಗದ ಮೇರು ಹಾಸ್ಯ ನಟರಾಗಿದ್ದರು, ನರಸಿಂಹರಾಜು ಅವರ ಹಾಸ್ಯ ನಟನೆ ಉತ್ತುಂಗದಲ್ಲಿದ್ದಾಗ ಡಾ.ರಾಜಕುಮಾರ್ ಕಾಲ್ ಶೀಟ್ ಪಡೆಯುವ ಮೊದಲು ನರಸಿಂಹರಾಜು ಅವರ ಕಾಲ್ ಶೀಟ್ ಪಡೆಯುತ್ತಿದ್ದರು, ಇಂಥ ಒಬ್ಬ ಮೇರು ಹಾಸ್ಯನಟ ರಂಗಭೂಮಿಯಿಂದ ಬಂದವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಟಕೋತ್ಸವ ಸಂಚಾಲಕ ಉಗಮ ಶ್ರೀನಿವಾಸ್, ರಾಜೇಶ್ ಗುಬ್ಬಿ ಹಾಜರಿದ್ದರು.
Comments are closed.