ತುಮಕೂರು: ದೇಶವನ್ನು ಸೂಪರ್ ಪವರ್ ಆಗಿಸುವಲ್ಲಿ ವಿದ್ಯಾರ್ಥಿಗಳು ಮತ್ತು ನವ ಯುವಕರ ಕೊಡುಗೆ ಅತ್ಯಗತ್ಯ, ಪ್ರತಿಯೊಬ್ಬ ಯುವಕನು ಉದ್ಯೋಗ ಹುಡುಕುವುದರ ಜೊತೆಗೆ ತಮ್ಮಲ್ಲಿರುವ ಕೌಶಲ್ಯ ಬಳಸಿಕೊಂಡು ಉದ್ಯೋಗ ಸೃಷ್ಟಿಸುವಂತಾಗಬೇಕು, ಮೊದಲು ಸಿಕ್ಕಿರುವ ಉದ್ಯೋಗಾವಕಾಶ ಉಪಯೋಗಿಸಿಕೊಂಡು ನಂತರ ವೇತನದ ಬಗ್ಗೆ ಯೋಚಿಸಿ, ಉದ್ಯೋಗಾವಕಾಶಗಳು ಚಿಕ್ಕದಿರಲಿ ದೊಡ್ಡದಿರಲಿ ಬಳಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರು, ಜಿಲ್ಲಾ ಕೌಶಲ್ಯ ಮಿಷನ್, ತುಮಕೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ತುಮಕೂರು ವಿಶ್ವ ವಿದ್ಯಾಲಯದ ಉದ್ಯೋಗ ಕೋಶ, ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ರೆಡ್ಡೀಸ್ ಫೌಂಡೇಶನ್, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉದ್ಯೋಗ ಮೇಳ-2025 ಕಾರ್ಯಕ್ರಮದ ಅಧ್ಯಕ್ಷತೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿಯ ಕುಲಸಚಿವರಾದ ನಾಹಿದಾ ಜಮ್ ಜಮ್ ಮಾತನಾಡಿ, ಜಿಲ್ಲಾಡಳಿತವು ನಿಮ್ಮ ಮನೆ ಬಾಗಿಲಿಗೆ ಕೆಲಸದ ಅವಕಾಶ ಸೃಷ್ಟಿಸುತ್ತಿದೆ, ಕಂಪನಿಗಳು ತಮಗೆ ಅವಶ್ಯವಿರುವ ಉದ್ಯೋಗಾಕಾಂಕ್ಷಿಗಳ ಕಡೆ ಗಮನ ಹರಿಸುತ್ತದೆ, ಆದ್ದರಿಂದ ಉದ್ಯೋಗಾಕಾಂಕ್ಷಿಗಳು ಉತ್ತಮ ಸಂವಹನ ಕೌಶಲ್ಯದ ಜೊತೆಗೆ ಉದ್ಯೋಗಕ್ಕೆ ಬೇಕಾದ ತಾಂತ್ರಿಕ ಕೌಶಲ್ಯ ಬೆಳೆಸಿಕೊಳ್ಳಬೇಕು, ತುಮಕೂರು ವಿವಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಇಂತಹ ಅನೇಕ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ತುಮಕೂರು ವಿವಿಯ ಉದ್ಯೋಗ ನಿಯೋಜನಾಧಿಕಾರಿ ಹಾಗೂ ಸಮಾಜಕಾರ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಪರಶುರಾಮ್.ಕೆ.ಜಿ. ಮಾತನಾಡಿ, ಈ ಬಾರಿ 11 ಸಾವಿರ ವಿದ್ಯಾರ್ಥಿಗಳು ಪದವಿ ಮುಗಿಸಿದ್ದಾರೆ, ಆದರೆ ಕೇವಲ ಒಂದೂವರೆ ಸಾವಿರ ವಿದ್ಯಾರ್ಥಿಗಳು ಮಾತ್ರ ಉನ್ನತ ವ್ಯಾಸಂಗಕ್ಕೆ ಸೇರಿದ್ದಾರೆ, ಉಳಿದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಉದ್ಯೋಗ ಮೇಳ ಆಯೋಜಿಸಬೇಕಾಗುತ್ತದೆ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆ ಉದ್ಯೋಗ ಮೇಳಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ, ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಕನಿಷ್ಠ ಎರಡು ಬಾರಿ ಬೃಹತ್ ಉದ್ಯೋಗ ಮೇಳ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ಅಧಿಕಾರಿ ಕಿಶೋರ್ ಕುಮಾರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಟಿ.ಕೆ.ಕೆಂಪಯ್ಯ, ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ, ಹಿರಿಯ ಪ್ರಾಧ್ಯಾಪಕ ಪ್ರೊ.ರಮೇಶ್ ಬಿ. ಇನ್ನಿತರರು ಹಾಜರಿದ್ದರು.
Comments are closed.