ರಾಮನವಮಿ ಸಂಭ್ರಮಾಚರಣೆಗೆ ಕೋವಿಡ್ ಕೊಕ್ಕೆ

287

Get real time updates directly on you device, subscribe now.

ತುರುವೇಕೆರೆ: ತಾಲೂಕು ವ್ಯಾಪ್ತಿಯ ಶ್ರೀರಾಮ, ಆಂಜನೇಯ ದೇಗುಲಗಳಲ್ಲಿ ಕೋವಿಡ್ ಆತಂಕದ ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ ಶ್ರೀರಾಮನವಮಿ ಆಚರಿಸುವ ಮೂಲಕ ಭಗವದ್ಬಕ್ತರು ರಾಮನಾಮ ಜಪಿಸಿ ಭಕ್ತಿ ಸಮರ್ಪಿಸಿದರು.
ಪಟ್ಟಣಕ್ಕೆ ಕೂಗಳತೆ ದೂರದ ಕೊಡಗೀಹಳ್ಳಿ ವೀರಾಂಜನೇಯಸ್ವಾಮಿ, ಹಾವಾಳದ ಗೊಂದಿ ಆಂಜನೇಯ ಸ್ವಾಮಿ, ಕೊಳಾಲ ಆಂಜನೇಯ ದೇಗುಲ, ಮಾಯಸಂದ್ರ ಅಭಯಾಂಜನೇಯ ಸ್ವಾಮಿ, ಸೋಮೇನಹಳ್ಳಿ ರಾಮದೇವಾಲಯ, ಪಟ್ಟಣದ ಬ್ರಾಹ್ಮಣ ಸಮಾಜದವರು ಗಾಯತ್ರಿ ಭವನದಲ್ಲಿ ಆಚರಿಸಿದರು. ಪಟ್ಟಣದ ಕೋಟೆ ಆಂಜನೇಯಸ್ವಾಮಿ, ಅಮೃತಶಿಲೆ ಆಂಜನೇಯ, ನಡುವಲಕೋಟೆ ಆಂಜನೇಯ, ದಬ್ಬೆಘಟ್ಟ ರಸ್ತೆಯ ಶ್ರೀರಾಮ ದೇಗುಲಗಳಲ್ಲಿ ರಾಮನವಮಿ ಅಂಗವಾಗಿ ಭಕ್ತರ ಅನುಪಸ್ಥಿತಿಯಲ್ಲಿ ಪೂಜೆ ಪುನಸ್ಕಾರ ನಡೆದವು. ಸೊರವನಹಳ್ಳಿ ಆಂಜನೇಯ ದೇಗುಲ, ಪೂಜೆ ನಂತರ ಬಹುತೇಕ ದೇಗುಲಗಳು ಬೀಗಮುದ್ರೆಗೊಳಗಾಗಿದ್ದವು.
ರಾಮನವಮಿಯ ಅಂಗವಾಗಿ ದೇಗುಲದ ಸ್ಥಿರ ಮೂರ್ತಿಗಳಿಗೆ ವಿಶೇಷಾಲಂಕಾರ ಮಾಡಲಾಗಿತ್ತು, ಸದ್ಯ ಎದುರಾಗಿರುವ ಕೋವಿಡ್ ಆತಂಕದ ನಡುವೆ ದೇಗುಲಗಳತ್ತ ಭಕ್ತರು ಸುಳಿಯದ ಹಿನ್ನಲೆಯಲ್ಲಿ ಪ್ರತಿವರ್ಷ ಭಕ್ತ ಸಮೂಹದಿಂದ ತುಂಬಿರುತ್ತಿದ್ದ ದೇಗುಲದ ಆವರಣಗಳು ಖಾಲಿಯಾಗಿದ್ದವು, ಸಾರ್ವಜನಿಕವಾಗಿ ಪ್ರಸಾದ ವಿನಿಯೋಗ, ಪಾನಕ , ಕೋಸಂಬರಿ, ವಿತರಣೆ ಇಲ್ಲವಾಗಿತ್ತು, ರಾಮನವಮಿ ಅಂಗವಾಗಿ ವಿಶೇಷಾಲಂಕೃತವಾಗಿದ್ದ ಶ್ರೀರಾಮ, ಆಂಜನೇಯ ಮೂರ್ತಿಗಳನ್ನು ವಾಟ್ಸಾಪ್, ಪೇಸ್ ಬುಕ್ಗಳಲ್ಲಿ ಭಕ್ತರು ಕಣ್ತುಂಬಿಕೊಳ್ಳಬೇಕಾಯಿತು.
ಕೋವಿಡ್ ಆತಂಕದಿಂದ ಮನೆ ಬಿಟ್ಟು ಹೊರ ಬಾರದ ಭಗವದ್ಬಕ್ತರು ಮನೆಗಳಲ್ಲಿಯೇ ಶ್ರೀರಾಮನವಮಿ ಆಚರಿಸಿ, ಕುಟುಂಬದವರೊಟ್ಟಿಗೆ ಕೋಸಂಬರಿ, ಪಾನಕ, ಸವಿದರು. ರಾಮನವಮಿ ಅಂಗವಾಗಿ ರಾಮ ಹಾಗೂ ಆಂಜನೇಯ ದೇಗುಲಗಳಲ್ಲಿ ಪರಸ್ಪರ ಭೇಟಿಯಾಗಿ ಸಂಭ್ರಮಿಸುತ್ತಿದ್ದ ಬಂಧುಗಳು ಹಾಗೂ ಸ್ನೇಹಿತರ ಮಿಲನಕ್ಕೆ ಕೋವಿಡ್ ಬ್ರೇಕ್ ಹಾಕಿತ್ತು.

Get real time updates directly on you device, subscribe now.

Comments are closed.

error: Content is protected !!