ತುಮಕೂರು: ನಾವು ವಾಸಿಸುವ ಹಟ್ಟಿಯೊಳಗೆ ಹೋಗಲು ದಾರಿ ಬಿಡದಂತೆ ಅಕ್ರಮವಾಗಿ ಬೇಲಿ ಹಾಕಿಕೊಂಡಿರುವ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಿ ದಾರಿ ಬಿಡಿಸಿಕೊಡುವಂತೆ ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿ ಬೆಜ್ಜಿಹಳ್ಳಿ ಗೊಲ್ಲರಹಟ್ಟಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಬೆಜ್ಜಿಹಳ್ಳಿ ಗೊಲ್ಲರಹಟ್ಟಿಯ ಗ್ರಾಮಸ್ಥರು ಹಟ್ಟಿಗೆ ಹೋಗಲು ಇರುವ ಕಾನೂನು ಬದ್ಧ ದಾರಿಯನ್ನೇ ಅತಿಕ್ರಮಿಸಿ ಬಲಾಢ್ಯರು ಬೇಲಿ ನಿರ್ಮಿಸಿಕೊಂಡಿದ್ದಾರೆ, ಕಳೆದ ಮೂರು ವರ್ಷಗಳಿಂದ ಕಿತಾಪತಿ ಮಾಡುತ್ತಿದ್ದು, ಇದೀಗ ದಾರಿಯನ್ನೇ ಬಂದ್ ಮಾಡಿದ್ದಾರೆ, ಹೀಗಾದರೆ ನಾವು ನಮ್ಮ ವಾಸ ಸ್ಥಳದ ಊರಿಗೆ ಹೋಗುವುದಾದರೂ ಹೇಗೆ? ಈ ಕೂಡಲೇ ಸದರಿ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.
ಬೆಜ್ಜಿಹಳ್ಳಿ ಗ್ರಾಮದ ಸ.ನಂ.102/1, 102/2, 102/3 ರಲ್ಲಿ ಮೂಲ ದಾಖಲೆಯಲ್ಲಿ ದಾರಿ ಗುರುತಿಸಿದೆ, ಕ್ರಯ ಪತ್ರದಲ್ಲಿನ ದಾಖಲೆಯಲ್ಲಿ ಪಾಲುಪತ್ರ ವಿಭಾಗ ನೋಂದಣಿ ದಾಖಲೆಯಲ್ಲಿ ದಾರಿ ಇದೆ, ಆಕಾರ್ ಬಂದ್ನಂತೆ ಒಂದು ಎಕರೆ ನಾಲ್ಕು ಗುಂಟೆ ಜಮೀನಿನಲ್ಲಿ ಕರಾಬು 30 ಗುಂಟೆ ಇರುತ್ತದೆ. ಮೂಲ ದಾಖಲೆಯಲ್ಲಿ ಖಾಯಂ ಬಂಡಿದಾರಿ ಇರುವ ದಾಖಲೆ ಇದೆ. 19.6.1974 ರಂದು 102/2 ರಲ್ಲಿ 30 ಗುಂಟೆ ಜಮೀನು ಕೊಂಡಿದ್ದು, ಉಳಿಕೆ ಜಮೀನು ಸೇರಿ ಸ್ಕೆಚ್ ಮಾಡಿಸಿಕೊಂಡಿರುತ್ತಾರೆ, ಸದರಿ ಜಮೀನುಗಳಿಗೆ ಸಂಬಂಧಿಸಿದಂತೆ ಗೊಲ್ಲ ಜನಾಂಗದ 60 ರಿಂದ 70 ಕುಟುಂಬದವರಿದ್ದು, ಸುಮಾರು 200ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುತ್ತದೆ, 1000ಕ್ಕೂ ಅಧಿಕ ಕುರಿ, ಮೇಕೆ ಜಾನುವಾರುಗಳಿವೆ. ಇವುಗಳಿಗೆ ಓಡಾಡಲು ಪ್ರತ್ಯೇಕ ದಾರಿ ಇರುವುದಿಲ್ಲ.
ಜನ ಮತ್ತು ಜಾನುವಾರು ಹೊಂದಿರುವ ಈ ಜನವಸತಿ ಪ್ರದೇಶದಲ್ಲಿ ಇವರ ಕೃತ್ಯದಿಂದಾಗಿ ಓಡಾಡಲು ದಾರಿ ಇಲ್ಲದಂತಾಗಿರುವುದು ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ, ಭಾಗ್ಯಮ್ಮ, ಹೆಂಜಾರಪ್ಪ, ಅರುಣ್ ಕುಮಾರ್, ಜಲದೇಶ್, ನಂಜುಂಡಪ್ಪ ಇವರುಗಳು ಈ ಪ್ರದೇಶದಲ್ಲಿ ತುಂಬಾ ಕಿರುಕುಳ ಕೊಡುತ್ತಿದ್ದು, ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆಯ ಪೈಪ್ ಲೈನ್ ಅಳವಡಿಸಲೂ ಸಹ ತೊಂದರೆಯಾಗಿದೆ, ಇದರಿಂದಾಗಿ ನೀರಿನ ಸಂಪರ್ಕ ಇಲ್ಲದೆ ಪರದಾಡಬೇಕಾಗಿದೆ, ಹೀಗೆ ಜನ ಜಾನುವಾರುಗಳಿಗೆ ರಸ್ತೆಗೆ ಅಡಚಣೆ ಮಾಡಿ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಸಾರ್ವಜನಿಕರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳು ಹಾಗೂ ಸ್ಥಳೀಯ ಆಡಳಿತಕ್ಕೆ ಕರೆ ಮಾಡಿ ಕೂಡಲೇ ಸ್ಥಳಕ್ಕೆ ತೆರಳಿ ವರದಿ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ಗೆಜ್ಜೆಪ್ಪ, ನರಸಿಂಹಯ್ಯ, ಚಿಕ್ಕಣ್ಣ, ಪುಟ್ಟೀರಮ್ಮ, ಈರಣ್ಣ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಒಬಿಸಿ ರಾಜ್ಯ ಉಪಾಧ್ಯಕ್ಷ ಹಾರೋಗೆರೆ ಮಹೇಶ್, ಚಂಗಾವರ ಕೃಷ್ಣಪ್ಪ, ಮಾದಾಪುರ ಜಿ.ಶಿವಣ್ಣ ಮುಂತಾದವರಿದ್ದರು.
Comments are closed.