ಜಾನಪದಿಂದ ಮಾನವೀಯ ಮೌಲ್ಯ ಕಲಿಯಿರಿ

ಜಾನಪದದ ನಡೆ ವಿದ್ಯಾರ್ಥಿಗಳ ಕಡೆ ಕಾರ್ಯಕ್ರಮದಲ್ಲಿ ಪ್ರಭು ಸಲಹೆ

3

Get real time updates directly on you device, subscribe now.


ತುಮಕೂರು: ಓರ್ವ ವ್ಯಕ್ತಿ ಪರಿಪೂರ್ಣ ವ್ಯಕ್ತಿತ್ವ ಹೊಂದಲು ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಶಿಷ್ಟ ಶಿಕ್ಷಣದ ಜೊತೆಗೆ, ಜಾನಪದಿಂದ ಕಲಿಯುವ ಮಾನವೀಯ ಮೌಲ್ಯಗಳು ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಜಿ.ಪ್ರಭು ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ವಿವಿ ವಿಜ್ಞಾನ ಕಾಲೇಜಿನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ತುಮಕೂರು ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದದ ನಡೆ, ವಿದ್ಯಾರ್ಥಿಗಳ ಕಡೆ ಎಂಬ ವಿಚಾರ ಸಂಕಿರಣ, ಜಾನಪದ ಗಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬದುಕಿರಬೇಕಾದ ಶೇ.45- 50 ರಷ್ಟು ಅನುಭವಗಳನ್ನು ಶಿಷ್ಟ ಶಿಕ್ಷಣದಿಂದ ಪಡೆದರೆ, ಶೇ.35- 40 ರಷ್ಟು ಅಂಶಗಳನ್ನು ನಾವು ಸಮಾಜ ನೋಡುವುದರಿಂದ ಕಲಿಯುತ್ತೇವೆ, ಆದರೆ ಉಳಿದ 10 ರಷ್ಟು ಅಂಶಗಳು ನಮಗೆ ಜಾನಪದದಿಂದ ಸಿಗುತ್ತವೆ, ನಮ್ಮ ನಡೆ, ನುಡಿ, ಆಚಾರ, ವಿಚಾರ ಎಲ್ಲದರ ಮೇಲೆ ಆಯಾಯ ಭಾಗದ ಜನಪದ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತವೆ ಎಂದರು.

ಲೇಖಕಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ.ಹೆಚ್.ಎಲ್.ಪುಷ್ಪ ಮಾತನಾಡಿ, ಸಂತೋಷವೇ ಜನಪದದ ಮೂಲ, ಜನಪದವನ್ನು ಮುಂದಿನ ಪೀಳಿಗೆಗೆ ತಲುಪಿಸುವ ವಾರಸುದಾರರು ನೀವಾಗಬೇಕು, ಹಾಗಾಗಿ ಅಕಾಡೆಮಿ ಇದೇ ರೀತಿಯ ಕಾರ್ಯಕ್ರಮಗಳಲ್ಲಿ ನಾಡಿನ ಎಲ್ಲಾ ಪದವಿ ಕಾಲೇಜುಗಳಲ್ಲಿಯೂ ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಯುವ ಜನರಿಗೆ ಪರಿಚಯಿಸಲಿ ಎಂಬ ಆಶಯ ವ್ಯಕ್ತಪಡಿಸಿ, ಜನಪದ ಕೇವಲ ಸ್ಪರ್ಧೆಗಳಿಗಷ್ಟೇ ಸಿಮೀತವಾಗದೆ, ಯುವ ಜನರ ಜೀವನದಲ್ಲಿ ಹಾಸು ಹೊಕ್ಕಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಇತಿಹಾಸದಲ್ಲಿ ಅನೇಕ ಜನರನ್ನು ನೋಡಿದ್ದೇವೆ, ಅವರ ಹೆಸರು ಇನ್ನೂ ನೂರಾರು ತಲೆಮಾರುಗಳು ಹೋದರೂ ಜೀವಂತವಿರುತ್ತೇವೆ, ಇದಕ್ಕೆ ಕಾರಣ ಅವರು ಎಂದು ಅವರಿಗಾಗಿ ಬದುಕಿದವರಲ್ಲ, ಜನರಿಗಾಗಿ ಬದುಕಿದವರು, ಗಾಂಧಿ, ಅಂಬೇಡ್ಕರ್, ಬುದ್ದ, ಬಸವ, ಕುವೆಂಪು ಇವೆಲ್ಲರೂ ತಮಗಿಂತ ಇತರರ ಸುಖದಲ್ಲಿ ತಮ್ಮ ಸಂತೋಷ ಕಂಡವರು, ನಮ್ಮ ಯುವ ಜನರಿಗೆ ಎಲ್ಲಾ ಕ್ರಿಕೆಟ್ ಆಟಗಾರರು, ಚಲನಚಿತ್ರ ನಾಯಕ ಪರಿಚಯವಿದೆ, ಆದರೆ ನಮ್ಮ ತಾತ, ಮುತ್ತಾತನ ಪರಿಚಯವಿಲ್ಲ, ಕನಿಷ್ಠ ನಾವಾದರೂ ನಾಲ್ಕು ತಲೆಮಾರು ನಮ್ಮ ಹೆಸರು ನೆನಪಿಟ್ಟುಕೊಳ್ಳುವಂತೆ ಬದುಕೋಣ, ಇದಕ್ಕೆ ಜನಪದ ನಿಮಗೆ ಸ್ಪೂರ್ತಿಯಾಗಲಿದೆ ಎಂದರು.

ಹಿರಿಯ ಜಾನಪದ ವಿದ್ವಾಂಸ ಪಾವಗಡದ ಸಣ್ಣ ನಾಗಪ್ಪ ಅವರು ಜನಪದ ಕಲೆಗಳ ಉಳಿಯುವಿಕೆಯಲ್ಲಿ ಯುವ ಜನರ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ್, ಜಾನಪದ ಆಕಾಡೆಮಿ ವತಿಯಿಂದ ಹಿರಿಯ ಗಾಯಕರಾದ ಕಲಾಶ್ರೀ ಆನಂದ ಮಾದಲಗೆರೆ, ವಿವಿ ಕುಲಸಚಿವರಾದ ನಾಹಿದ ಜಮ್, ಜಮ್, ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ, ತುಮಕೂರು ವಿವಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ.ಎಂ.ಪ್ರಕಾಶ್ ಶೆಟ್, ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು, ಡಾ.ವೆಂಕಟರೆಡ್ಡಿ ರಾಮರೆಡ್ಡಿ, ಡಾ.ರಾಮಕೃಷ್ಣ.ಜಿ, ಕಲಾವಿದರಾದ ಶಂಕರಣ್ಣ ರಾಮಪ್ಪ ಸಂಕಣ್ಣನವರ್, ಮೆಹಬೂಬ್ ಕಿಲ್ಲೆದಾರ್, ಕು.ದಿಶಾ, ಕಾವ್ಯ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!