ಕುಣಿಗಲ್: ಬೆಲೆ ಏರಿಕೆಯ ಅಬ್ಬರದ ನಡುವೆ ಮಾರುಕಟ್ಟೆಗೆ ಅವರೆಕಾಯಿ, ಕಬ್ಬಿನ ಆವಕ ಕಡಿಮೆಯಾದ ಹಿನ್ನೆಲೆಯಲ್ಲಿ ಎರಡೂ ಪದಾರ್ಥಗಳು ಹೆಚ್ಚಿನ ದರಕ್ಕೆ ಮಾರಾಟವಾಗುವ ಮೂಲಕ ಸಂಕ್ರಾಂತಿ ಹಬ್ಬಾಚರಣೆಗೆ ಬೆಲೆ ಏರಿಕೆ ನಡುವೆಯೆ ಗೃಹಿಣಿಯರು ಗೊಣಗಾಡಿಕೊಂಡು ಖರೀದಿಯಲ್ಲಿ ತೊಡಗಿದ್ದು ಈ ಬಾರಿ ಸಂಕ್ರಾಂತಿ ಹಬ್ಬದ ಖರೀದಿ ವಿಶೇಷವಾಗಿತ್ತು.
ಹಬ್ಬದ ವಿಶೇಷ ಅವರೆಕಾಯಿ ಕಳೆದ ಮೂರು ದಿನಗಳಿಂದ ಏರುಗತಿ ಕಾಯ್ದುಕೊಂಡು ಹಬ್ಬದ ಮುನ್ನ ದಿನ ಸೋಮವಾರಕ್ಕೆ ಹೊಸ ಮಾಲು ಕೆಜಿ 120 ಆದರೆ ಸ್ವಲ್ಪ ಹಳೆಯದು 100 ರೂ. ಕೆಜಿಯೊಂದಕ್ಕೆ ಮಾರಾಟವಾಯಿತು, ಚೌಕಾಸಿಗೆ ಅವಕಾಶವೇ ನೀಡದೆ ಮಾರಾಟಗಾರರು ಖಡಕ್ ದರಕ್ಕೆ ಎಲ್ಲರೂ ಮಾತನಾಡಿಕೊಂಡಂತೆ ಇಡೀ ಬಜಾರಿನ ತುಂಬ ಒಂದೇ ದರಕ್ಕೆ ಮಾರಾಟ ಮಾಡಿದರು.
ಈ ಮಧ್ಯೆ ಹಾಸನ, ಗುಂಡ್ಲುಪೇಟೆ ಇತರೆ ಕಡೆಗಳಿಂದ ಪಟ್ಟಣಕ್ಕೆ ಅವರೆಕಾಯಿ ಆವಕ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಆವಕವಾದ್ದರಿಂದ ಸಂಗ್ರಹ ಇಟ್ಟುಕೊಂಡವರು ಮಾರುಕಟ್ಟೆಗೆ ಹೆಚ್ಚಿನ ಅವರೆಕಾಯಿ ಬಿಡದ ಪರಿಣಾಮ ದರ ಒಂದೆ ರೀತಿ ಮುಂದುವರೆದಿತ್ತು, ಕಬ್ಬಿನ ಜಲ್ಲೆ ಒಂದಕ್ಕೆ 60ರೂ. ನಂತೆ ಮಾರಾಟವಾಗಿದ್ದು ಸ್ಥಳೀಯವಾಗಿ ಬೆಳೆದ ಕಬ್ಬು ಮಾರುಕಟ್ಟೆಗೆ ಬಾರದ ಕಾರಣ ಹೊರಗಿನಿಂದ ಕಬ್ಬಿನ ಜಲ್ಲೆ ಅವಕ ಕಡಿಮೆಯಾದ್ದರಿಂದ ದರ ಏರಿಕೆಯಾಗಿತ್ತು, ಸಿಹಿ ಗೆಣಸು ಕೆಜಿಯೊಂದಕ್ಕೆ 50ರೂ. ನಿಂದ 60ರೂ. ಮಾರಾಟವಾಯಿತು, ರೆಡಿಮೆಡ್ ಎಳ್ಳು ಗುಣಮಟ್ಟ ಆಧರಿಸಿದ 350 ರಿಂದ 750 ರೂ. ವರೆಗೂ ಮಾರಾಟವಾಯಿತು.
ಒಟ್ಟಿನಲ್ಲಿ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬಕ್ಕೆ ಬೆಲೆ ಏರಿಕೆಯ ಅಬ್ಬರದ ನಡುವೆಯೂ ಗೃಹಿಣಿಯರು, ರೈತರು ಅಗತ್ಯ ವಸ್ತುಗಳ ಖರೀದಿ ಮಾಡಲು ಹೆಚ್ಚಿನ ಉತ್ಸಾಹ ತೋರಿದ್ದು ವಿಶೇಷವಾಗಿತ್ತು.
Comments are closed.