ತುಮಕೂರು: ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ಹಿಂಸೆ ಮಾಡಿದ ಪ್ರಕರಣ ಖಂಡಿಸಿ, ಪ್ರಕರಣದ ಹಿಂದಿರುವ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳದೆ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೆಗ್ಗೆರೆಯ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು.
ಸಚಿವರ ನಿವಾಸದ ಬಳಿ ಬೀಡುಬಿಟ್ಟಿದ್ದ 200 ಕ್ಕೂ ಹೆಚ್ಚು ಮನೆಗೆ ಮುತ್ತಿಗೆ ಹಾಕಲು ಬಂದ ಮುಖಂಡರನ್ನು ಪ್ರತ್ಯೇಕವಾಗಿ ವಶಕ್ಕೆ ಪಡೆದು ನಗರದ ಚಿಲುಮೆ ಸಮುದಾಯ ಭವನಕ್ಕೆ ಕರೆದೊಯ್ದರು, ಶಾಸಕ ಬಿ.ಸುರೇಶ್ ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆ ಮಾಡಲೂ ಪೊಲೀಸರು ಅವಕಾಶ ನೀಡದೆ ತಡೆದ ಕ್ರಮ ಖಂಡಿಸಿದ ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್ ಗೌಡರು, ದೇಶದಲ್ಲಿ ಗೋವನ್ನು ದೇವರೆಂದು ಪೂಜಿಸುತ್ತೇವೆ, ಅದು ನಮಗೆ ಅಮೃತ ಕೊಡುತ್ತದೆ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಪದೇಪದೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೃತ್ಯ ನಡೆಯುತ್ತಿವೆ, ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಗೋ ಮಾತೆ ಮೇಲಿನ ದೌರ್ಜನ್ಯ ಎಲ್ಲರೂ ಖಂಡಿಸುವಂತಹ ಹೇಯಕೃತ್ಯ, ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು, ಇಲ್ಲವಾದರೆ ಸರ್ಕಾರದ ಮಂತ್ರಿಗಳು ಬಂದಕಡೆಯಿಲ್ಲಾ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವರು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಎಸ್.ಶಿವಪ್ರಸಾದ್, ದಿಲೀಪ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು, ಸಂದೀಪ್ ಗೌಡ, ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ರೈತ ಮೋರ್ಚಾ ನಗರ ಅಧ್ಯಕ್ಷ ಸತ್ಯಮಂಗಲ ಜಗದೀಶ್, ಜಿಲ್ಲಾ ಒಬಿಸಿ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಚೇತನ್, ಪ್ರಧಾನ ಕಾರ್ಯದರ್ಶಿ ಧನುಷ್, ಮುಖಂಡರಾದ ಗುಬ್ಬಿ ಪಂಚಾಕ್ಷರಿ, ಗಣೇಶ್ ಪ್ರಸಾದ್, ಬನಶಂಕರಿಬಾಬು, ತಿಪ್ಪೇಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಹೋರಾಟದಲ್ಲಿ ಭಾಗಿಯಾಗಿದ್ದರು.
Comments are closed.