ಶಿರಾ: ರೈತರು ವಿಷ ಸೇವನೆಗೆ ಮುಂದಾಗಿದ್ದರೂ ಅವರನ್ನು ತಡೆಯದೇ ಸರ್ಕಾರ ತನ್ನ ಬೇಜವಾಬ್ದಾರಿ ತನ ತೋರಿದೆ, ಇದೊಂದು ಬೇಜವಾಬ್ದಾರಿ ಸರ್ಕಾರ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಹಿನ್ನೆಲೆ: ಕಲ್ಲುಕೋಟೆ ಸರ್ವೆ ನಂ. 118ರ ಗೋಮಾಳ ಜಮೀನಿನಲ್ಲಿ ಬಗರ್ ಹುಕುಂ ಸಾಗುವಳಿ ನಡೆಸುತ್ತಿದ್ದ ಕುಟುಂಬದ ಸದಸ್ಯರು ಮತ್ತು ಸರ್ಕಾರ ಉದ್ದೇಶಿಸಿರುವ ಆಶ್ರಯ ನಿವೇಶನಗಳ ವಿಂಗಡನೆಗೆ ತೆರಳಿದ್ದ ಅಧಿಕಾರಿಗಳ ನಡುವೆ ಜಟಾಪಟಿ ನಡೆದು, ಜಮೀನನ್ನು ಸರ್ಕಾರದ ವಶಕ್ಕೆ ಕೊಡಲು ನಿರಾಕರಿಸಿದ ರೈತರಿಬ್ಬರು ಸ್ಥಳದಲ್ಲೇ ವಿಷ ಸೇವನೆ ಮಾಡಿ, ಆಸ್ಪತ್ರೆಗೆ ದಾಖಲಾಗಿರುವ ಸಂಗತಿ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ.
ಉದ್ದೇಶಿತ ಜಮೀನಲ್ಲಿ ಇನ್ನೂ ಪ್ರತಿಭಟನೆ ನಡೆಸುತ್ತಿದ್ದ ರೈತ ಕುಟುಂಬದವರ ಅಹವಾಲನ್ನು ಸ್ಥಳಕ್ಕೆ ತೆರಳಿ ಆಲಿಸಿದ ಸಂಸದ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು, ಕಳೆದ 40 ವರ್ಷಗಳಿಂದ ರೈತರು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ, ಪಹಣಿ ಕಲಂನಲ್ಲಿ ಅವರ ಹೆಸರು ಕೂಡಾ ಬರುತ್ತಿದೆ, ಇದೇ ಜಮೀನಿನ ಉಳಿದ 20 ಎಕರೆ ಬೇರೆ ಬೇರೆಯವರಿಗೆ ಮಂಜೂರು ಮಾಡಿದ್ದಾರೆ, ಆದರೆ ಈ ರೈತರಿಗೆ ಮಾತ್ರ ದಾಖಲೆ ಆಗಿಲ್ಲ, ನ್ಯಾಯ ಸಮ್ಮತವಾಗಿ ಶಾಸಕರು ಇವರಿಗೂ ದಾಖಲೆ ಮಾಡಿಕೊಡಬೇಕು, ರೈತರನ್ನು ಒಕ್ಕಲೆಬ್ಬಿಸಿ ಈ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಬಾರದು ಎಂದು ಆಗ್ರಹಿಸಿದರು,
ಈ ಬಗ್ಗೆ ತಹಸೀಲ್ದಾರ್, ಪೌರಾಯುಕ್ತ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದರು.
ಸ್ಲಂ ಗೂಂಡಾ ಮಾದರಿ ಸರ್ಕಾರ: ಪ್ರತಿಭಟನಾ ನಿರತ ರೈತರ ಮೇಲೆ ಅಧಿಕಾರಿಗಳ ಮೂಲಕ ದೌರ್ಜನ್ಯ ಎಸಗುವ ಮೂಲಕ ಸರ್ಕಾರ ಸ್ಲಂ ಗೂಂಡಾಗಳ ತರಹ ವರ್ತಿಸಬಾರದು ಎಂದ ಸಂಸದ ಅನುಭವದಲ್ಲಿ ಇರುವ ರೈತರ ಗಮನಕ್ಕೆ ತಾರದೇ, ಯಾವುದೇ ರೀತಿಯ ನೋಟೀಸ್ ಕೊಡದೇ ಕ್ರಮ ಕೈಗೊಳ್ಳಲು ಮುಂದಾಗಿರುವುದು ಅಕ್ಷಮ್ಯ, ಅಸಹಾಯಕ ರೈತರ ಪರ ತಾವು ಮತ್ತು ತಮ್ಮ ಪಕ್ಷ ನಿಲ್ಲಲಿದೆ ಎಂದರು.
ನೆರವಿಗೆ ಧಾವಿಸಿದೆ ಅಷ್ಟೇ! ರಾಜಕೀಯ ಲಾಭಕ್ಕಾಗಿ ಅಲ್ಲ: ಶನಿವಾರ ನನ್ನ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ, ಆಗ ದೂರವಾಣಿ ಮೂಲಕ ವಿಷಯ ತಿಳಿಯಿತು, ತಕ್ಷಣ ಆಸ್ಪತ್ರೆಗೆ ಧಾವಿಸಿ, ಸಂತ್ರಸ್ತರಿಗೆ ಧೈರ್ಯ ತುಂಬಿದೆ, ಅಸ್ಪತ್ರೆಯಲ್ಲಿ ಫಿಸಿಷಿಯನ್ ವೈದ್ಯರು ಇಲ್ಲದೇ ಇದ್ದ ಕಾರಣ ಆತಂಕಕ್ಕೀಡಾಗಿದ್ದೆ, ಜನ ಪ್ರತಿನಿಧಿಯಾಗಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಅಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟು ನನ್ನ ಜವಾಬ್ದಾರಿ ನಿಭಾಯಿಸಲು ಆಸ್ಪತ್ರೆಗೆ ತೆರಳಿದ್ದೆ, ಇದರಲ್ಲಿ ರಾಜಕೀಯ ಏನೂ ಇಲ್ಲ, ಬಡವರಿಗಾಗಿ ನಿವೇಶನ ಕೊಡುವುದು ಸರಿ, ಆದರೆ ಅದಕ್ಕಾಗಿ ಇನ್ನೊಬ್ಬ ಬಡವರನ್ನು ಒಕ್ಕಲೆಬ್ಬಿಸುವುದಲ್ಲ, ಅವರು ಒಪ್ಪಿದರೆ, ಅವರಿಗೆ ಬೇರೆ ಕಡೆ ಜಮೀನು ಕೊಟ್ಟು ಮುಂದುವರೆಯಿರಿ, ಬಡ ಜನರ ಮೇಲೆ ದೌರ್ಜನ್ಯ ಬೇಡ ಅಷ್ಟೇ ಎಂದರು.
Comments are closed.