ನವ ಭಾರತ ನಿರ್ಮಾಣ ಯುವಕರ ಕೈಲಿದೆ

1

Get real time updates directly on you device, subscribe now.


ತುಮಕೂರು: ನವ ಭಾರತ ನಿರ್ಮಾಣಕ್ಕೆ ಯುವ ಜನತೆ ಮುಂದಾಗಬೇಕು, ಭಾರತವನ್ನು ಸುಭದ್ರವನ್ನಾಗಿ ಮಾಡುವ ಜವಾಬ್ದಾರಿ ಎಲ್ಲರದ್ದು ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ ಹೇಳಿದರು.

ತುಮಕುರು ವಿಶ್ವ ವಿದ್ಯಾಲಯ ಕಲಾ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ವತಿಯಿಂದ ಗುರುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 162ನೇ ಜನ್ಮ ಮಹೋತ್ಸವ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದೇಶಕ್ಕೋಸ್ಕರ ಜೀವನದುದ್ದಕ್ಕೂ ಪ್ರಾರ್ಥನೆ ಮಾಡಿ, ದೇಶವು ಪಾಶ್ಚಿಮಾತ್ಯರ ಹಿಡಿತದಿಂದ ಮುಕ್ತಿ ಪಡೆಯಬೇಕು ಎಂದು ಹೋರಾಡಿದ ಮಹಾನ್ ವ್ಯಕ್ತಿ ವಿವೇಕಾನಂದರು ಎಂದರು.

ನನ್ನದೇಶಕ್ಕೆ ನಾನು ಏನು ಮಾಡ ಬಲ್ಲೆ? ನನ್ನ ಸಂಸ್ಕೃತಿಗೆ ನನ್ನಕೊಡುಗೆ ಏನು? ಎಂದು ನೀವೇ ಪ್ರಶಿಸಿಕೊಳ್ಳಿ, ಮಂಗಳಕ್ಕೆ ಹೋದ ನಾವು ಮನದ ಅಂಗಳಕ್ಕೆ ಹೋಗುವುದಕ್ಕೆ ವಿಫಲ ಆಗುತ್ತಿದ್ದೇವೆ ಎಂದರು.
ಶಾಲೆಯ ಶಿಕ್ಷಣದಲ್ಲಿ ಅಗತ್ಯ ವಿಚಾರಗಳಿಗಿಂತ ಅನಗತ್ಯ ವಿಚಾರಗಳನ್ನು ತುಂಬುತ್ತಿದ್ದಾರೆ, ಸ್ವಾಮಿ ವಿವೇಕಾನಂದರವರ ವಿಚಾರಧಾರೆ ಕಣಕಣದಲ್ಲಿ ಬರಬೇಕು, ಯುವ ಜನತೆ ಶಕ್ತಿಯ ಜ್ವಾಲೆಗಳಾಗಬೇಕು ಎಂದರು.

ಶಿಕ್ಷಣ ತಜ್ಞರಾದ ಕೆ.ಆರ್.ಪದ್ಮಿನಿ ಮಾತನಾಡಿ, ಸ್ವಾಮಿ ವಿವೇಕಾನಂದರು ಪರೀಕ್ಷಿಸದೆ ಯಾವುದನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ, ಏಕಾಗ್ರತೆ ಎಂಬುದು ಜೀವನದ ಮುಖ್ಯ ಘಟ್ಟ, ಶಕ್ತಿ ನಮ್ಮೊಳಗೆ ಇದೆ, ನಾವು ಏನು ಬೇಕಾದರೂ ಸಾಧಿಸಬಹುದು, ಶಕ್ತಿಯ ಗಣಿಗಳಾಗಿ ಒಳ್ಳೆಯ ವಿಚಾರಗಳಿಗೆ ಕಿವಿ ಕೊಡಿ, ಆತ್ಮವಿಶ್ವಾಸದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.

ವಿವೇಕವಂಶಿ ಸಂಸ್ಥೆಯ ನಿತ್ಯಾನಂದ ವಿವೇಕವಂಶಿ ಮಾತನಾಡಿ, ದೇಶ ಬದಲಿಸಬೇಕೆಂದರೆ ಮೊದಲು ಮನುಷ್ಯರನ್ನು ಬದಲಾಯಿಸಬೇಕು, ವಿವೇಕಾನಂದ ಅವರನ್ನು ಎಲ್ಲಾ ದೇಶಗಳು ಒಪ್ಪಿಕೊಳ್ಳುತ್ತವೆ, ಆಂತರಿಕವಾಗಿ ಬಲಿಷ್ಠರಾಗಿ ಪ್ರತಿಯೊಂದು ಆತ್ಮವು ಆಂತರ್ಯದಲ್ಲಿ ಜೀವಂತವಾಗಿದೆ, ಅದು ಅದಮ್ಯ ಶಕ್ತಿಯ ಗಡಿಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ವಿವೇಕಾನಂದರು ತಮ್ಮ ಸ್ವಾರ್ಥದ ಬಗ್ಗೆ ಚಿಂತಿಸಿರಲಿಲ್ಲ, ಸದಾ ದೇಶದ ಶಕ್ತಿಯನ್ನು ಪ್ರೇರೇಪಿಸಿದರು, ನಾವು ನಮ್ಮ ಶಕ್ತಿಯನ್ನು ದೇಶಕ್ಕೆ ಹೇಗೆ ಹಂಚಿಕೆ ಮಾಡಬೇಕು ಎಂದು ತಿಳಿಸಿ ಕೊಟ್ಟವರು ಅವರು, ಅಸಾಧಾರಣ ವಿಚಾರಗಳನ್ನು ಚಿಂತಿಸುವ ವ್ಯಕ್ತಿ ಮಹಾ ಪುರುಷನಾಗುತ್ತಾನೆ, ಯುವ ಜನತೆ ಅಂತರಂಗದ ಶಕ್ತಿ ಹೆಚ್ಚಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಬೇಕು ಎಂದರು.

ತುಮಕೂರು ವಿವಿಯ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ವಿವೇಕಾನಂದ ಅಧ್ಯಯನ ಪೀಠ ಸಂಯೋಜಕ ಡಾ.ಚೇತನ್ ಪ್ರತಾಪ್.ಕೆ.ಎನ್. ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!