ಸಮಾಜದ ಸ್ವಾಸ್ತ್ಯ ಕೆಡಿಸುತ್ತಿವೆ ಸಾಮಾಜಿಕ ಜಾಲತಾಣ

2

Get real time updates directly on you device, subscribe now.


ಕುಣಿಗಲ್: ಸಾಮಾಜಿಕ ಜಾಲತಾಣಗಳು ಸ್ವಾತಂತ್ರ್ಯ ಗಳಿಸುವ ಕಾಲದಲ್ಲಿ ಇದ್ದಿದ್ದರೆ, ದೇಶಕ್ಕೆ ಸ್ವಾತಂತ್ರ್ಯವೆ ಸಿಗುತ್ತಿರಲಿಲ್ಲ, ಸಾಮಾಜಿಕ ಜಾಲ ತಾಣಗಳು ಬ್ರಿಟಿಷರ ಪರವಾಗಿಯೇ ವರ್ತಿಸುತ್ತಿದ್ದವು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ಗುರುವಾರ ತಾಲೂಕಿನ ಯಡಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಸದರ ಜನಸ್ಪಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಸಮಾಜಕ್ಕೆ ಪೂರಕವಾಗಬೇಕಿದ್ದ ಸಾಮಾಜಿಕ ಜಾಲತಾಣಗಳು ಸಮಾಜದ ಸ್ವಾಸ್ತ್ಯ ಕದಡುವ ಕೆಲಸ ಮಾಡುತ್ತಿವೆ, ಶೇ.70 ರಷ್ಟು ಸುಳ್ಳನ್ನೆ ಹರಡುತ್ತಿದ್ದು ಕುಟುಂಬಗಳು, ದಾಂಪತ್ಯದಲ್ಲಿ, ಆಡಳಿತದಲ್ಲಿ ಒಡುಕುಂಟು ಮಾಡುತ್ತಾ ಹಲವು ಅನಾಹುತಗಳಿಗೆ ಕಾರಣವಾಗಿ ಸಾಕಷ್ಟು ಸಮಸ್ಯೆ ಉಂಟು ಮಾಡುತ್ತಿರುವ ಕಾರಣ ಯುವ ಜನರೂ ಸೇರಿದಂತೆ ಎಲ್ಲಾ ವರ್ಗದ ಜನರು ಸಾಮಾಜಿಕ ಜಾಲತಾಣದ ವಿಷಯಗಳ ಬಗ್ಗೆ ಎಚ್ಚರವಹಿಸಬೇಕು, ದೇಶದಲ್ಲಿ ಕ್ಯಾನ್ಸರ್ನಿಂದ ವಾರ್ಷಿಕ ಲಕ್ಷ ಮಂದಿ ಕ್ಯಾನ್ಸರ್ ನಿಂದ ಮೃತಪಟ್ಟರೆ, ರಸ್ತೆ ಅಪಘಾತ ದಲ್ಲಿ 4.50 ಲಕ್ಷಕ್ಕೂ ಅಧಿಕ ಮಂದಿ ಮೃತ ಪಡುತ್ತಿರುವುದು ಗಂಭೀರ ವಿಷಯವಾಗಿದೆ, ಅಪಘಾತವಾದಾಗ ಗಾಯಾಳುಗಳ ತುರ್ತು ಚಿಕಿತ್ಸೆಗೆ 125 ಕಿ.ಮೀ.ಗೆ ಒಂದರಂತೆ ಮಿನಿ ಟ್ರಾಮ ಸೆಂಟರ್ (ತುರ್ತು ಚಿಕಿತ್ಸಾ ಕೇಂದ್ರ) ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇನೆ, ರಾಜ್ಯ ಸರ್ಕಾರ ಕಟ್ಟಡಗಳ ಕಟ್ಟುವ ಜೊತೆಯಲ್ಲಿ ಮೂಲಭೂತ ವ್ಯವಸ್ಥೆಗೂ ಆದ್ಯತೆ ನೀಡಬೇಕು, ಸಚಿವರ ಕ್ಷೇತ್ರ ಸೇರಿದಂತೆ ಬಹುತೇಕ ಎಲ್ಲಾ ಶಾಸಕರ ಕ್ಷೇತ್ರದಲ್ಲೂ ಆಸ್ಪತ್ರೆ ಕಟ್ಟಡ ಇದೆ, ಅದಕ್ಕೆ ಬೇಕಾದ ವೈದ್ಯರು, ವೈದ್ಯೇತರ ಸಿಬ್ಬಂದಿ ಇಲ್ಲ, ಶಾಲಾ ಕಟ್ಟಡ ಇದೆ, ಶಿಕ್ಷಕರು, ಸಿಬ್ಬಂದಿ ಇಲ್ಲ, ಇದರಿಂದ ಸಮಸ್ಯೆ ಹೆಚ್ಚೆ ಹೊರತು ಅಭಿವೃದ್ಧಿ ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಅಗತ್ಯಕ್ರಮಕ್ಕೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ಯಡಿಯೂರು ಪುಣ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯವೃದ್ಧಿ ಸೇರಿದಂತೆ ಸ್ಥಳೀಯ ಜನರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುತ್ತೇನೆ, ಬೆಂಗಳೂರು ಜನರ ಬಹುದಿನಗಳ ಬೇಡಿಕೆಯಿದ್ದ ಅಮೆರಿಕ ರಾಜತಾಂತ್ರಿಕ ಕಚೇರಿ ಶುಕ್ರವಾರ ಆರಂಭಗೊಳ್ಳಲಿದ್ದು ಇದಕ್ಕೆ ಪ್ರಧಾನಿ ಹಾಗೂ ವಿದೇಶಾಂಗ ಸಚಿವರ ಸಹಕಾರ ಹೆಚ್ಚಿದೆ, ಇದರಿಂದ ಅಮೆರಿಕಾ ಪ್ರವಾಸ ಸೇರಿದಂತೆ ಇತರೆ ಅಗತ್ಯತೆಗಳಿಗೆ ತೆರಳುವವರು ಚೆನ್ನೈಗೆ ಹೋಗುವ ಬದಲು ಬೆಂಗಳೂರಿನಲ್ಲಿ ಸೌಲಭ್ಯ ಪಡೆಯಬಹುದಾಗಿದೆ, ಅಧಿಕಾರಿಗಳು ಯಾವುದೇ ಪಕ್ಷದ ಪರ ಕೆಲಸ ಮಾಡದೆ ಜನಪರ ವಾಗಿ ಕೆಲಸ ಮಾಡಿದಾಗ ಜನಮನ್ನಣೆ ಗಳಿಸುವ ಜೊತೆಯಲ್ಲಿ ವೃತ್ತಿ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳುತ್ತಾರೆ ಎಂದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಮಾತನಾಡಿ, ಶಾಸಕರು ಸಂಸದರ ಭೇಟಿ ವೇಳೆಯಲ್ಲಿ ಅಧಿಕಾರಿಗಳು ಹೋಗದಂತೆ ತಡೆ ಹಿಡಿದಿದ್ದಾರೆ, ಇವರ ಧೋರಣೆಗೆ ನಾಚಿಕೆ ಆಗಬೇಕು, ಕಾಲ ಹೀಗೆ ಇರುವುದಿಲ್ಲ, ಸಂಸದ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ ರಾಜಕಾರಣ ಮಾಡಲು ಬಂದಿಲ್ಲ, ಜನಪರ ಸೇವೆಗೆ ಬಂದಿದ್ದು ಶಾಸಕರ ಧೋರಣೆಗೆ ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠಕಲಿಸುತ್ತಾರೆ ಎಂದರು.

ತುಮುಲ್ ನಿರ್ದೇಶಕ ಡಿ.ಕೃಷ್ಣಕುಮಾರ್ ಮಾತನಾಡಿ, ಹಿಂದಿನ ಸಂಸದ ಡಿ.ಕೆ.ಸುರೇಶ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಮೇಳ ನಡೆಸಿ ಸರ್ಕಾರದ ನೆರವು ಪಡೆದು ಅದನ್ನು ಡಿಕೆಶಿ ಟ್ರಸ್ಟ್ ಕಾರ್ಯಕ್ರಮ ಎಂದು ಬಿಂಬಿಸಿ ಸಣ್ಣತನದ ರಾಜಕಾರಣ ಮಾಡಿದ್ದರು, ಆದರೆ ನಮ್ಮ ಜನಪ್ರಿಯ ಸಂಸದ ಹೃದಯವಂತ ಡಾ.ಸಿ.ಎನ್.ಮಂಜುನಾಥ್ ಜನಪರವಾಗಿ ಕೆಲಸ ಮಾಡುತ್ತಾ ಜನರ ಸಮಸ್ಯೆಗೆ ಕೇಂದ್ರ, ರಾಜ್ಯ ಸರ್ಕಾರದ ಮಟ್ಟದಲ್ಲಿ ಧ್ವನಿಯಾಗುತ್ತಾರೆ, ತಾಲೂಕು ಅಧಿಕಾರಿಗಳನ್ನು ಸಂಸದರ ಕಾರ್ಯಕ್ರಮಕ್ಕೆ ಹೋಗದಂತೆ ತಡೆ ಹಿಡಿದಿರುವ ಶಾಸಕ ಡಾ.ರಂಗನಾಥ್ ಗೆ ಯಡಿಯೂರು ಸಿದ್ದಲಿಂಗೇಶ್ವರನೆ ನೋಡಿಕೊಳ್ಳಲಿ ಎಂದರು.

ಯಡಿಯೂರು ಸುತ್ತಮುತ್ತಲ ಗ್ರಾಮಗಳ ಜನರು ತಮ್ಮ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು, ಯಡಿಯೂರು ಪಿಎಸಿಎಸ್ ಅಧ್ಯಕ್ಷ ತಿಮ್ಮೇಗೌಡ, ಪ್ರಮುಖರಾದ ದೀಪು, ಶ್ರೀನಿವಾಸ, ಕೃಷ್ಣಮೂರ್ತಿ, ಜಗದೀಶ್, ಗಂಗಾಧರಯ್ಯ, ನಾರಾಯಣ, ವೆಂಕಟೇಶ, ಕುಮಾರಸ್ವಾಮಿ, ಮರಿಯಣ್ಣ, ಯಡಿಯೂರು ಗ್ರಾಪಂ ಪಿಡಿಒ ಚಂದ್ರಹಾಸ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!