ಕುಣಿಗಲ್: ಬೆಂಗಳೂರಿನಿಂದ ಯಡಿಯೂರು ಜನಸ್ಪಂದನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರನ್ನು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಸಿಂಗೋನಹಳ್ಳಿ ಅಗ್ರಹಾರ ಗೇಟ್ ಬಳಿ ತಡೆದ ಗ್ರಾಮಸ್ಥರು ಅಪಘಾತ ರಹಿತ ವಲಯವನ್ನಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಒತ್ತಾಯಿಸಿದರು.
ಗ್ರಾಮಸ್ಥರ ಪರವಾಗಿ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಜಗದೀಶ್, ರಾಷ್ಟ್ರೀಯ ಹೆದ್ದಾರಿಯ ಈ ಜಾಗದಲ್ಲಿ ಸಾಕಷ್ಟು ಅಪಘಾತಗಳಾಗಿ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ನಾನೂರಕ್ಕೂ ಹೆಚ್ಚು ಮಂದಿ ವಿಕಲಾಂಗರಾಗಿದ್ದಾರೆ, ಹೆದ್ದಾರಿ ಪ್ರಾಧಿಕಾರದವರು, ಪೊಲೀಸರು ಈ ಜಾಗವನ್ನು ಬ್ಲಾಕ್ ಸ್ಪಾಟ್ ಆಗಿ ಗುರುತಿಸಿದ್ದು ಅಗತ್ಯ ಕ್ರಮಕ್ಕೆ ಹೆದ್ದಾರಿಗೆ ಅಂಡರ್ ಪಾಸ್ ನಿರ್ಮಾಣಕ್ಕೆ ಎಲ್ಲಾ ಕ್ರಮ ಕೈಗೊಂಡರೂ, ಸ್ಥಳೀಯ ಶಾಸಕರು ತಮ್ಮ ಹಿಂಬಾಲಕನ ಹೋಟೆಲ್ ಉದ್ಯಮ ಉಳಿಸಲು ಕಾಮಗಾರಿಗೆ ಅವಕಾಶ ನೀಡುತ್ತಿಲ್ಲ, ಇದರಿಂದಾಗಿ ಇನ್ನು ಸಾಕಷ್ಟು ಮಂದಿ ಜೀವ ಹೋಗುವ ಸಾಧ್ಯತೆ ಇದೆ, ಯಾರದೂ ಲಾಭಕ್ಕೆ ಅಮಾಯಕ ಗ್ರಾಮಸ್ಥರ, ಹೆದ್ದಾರಿ ಬಳಕೆದಾರರ ಜೀವ ಹರಣವಾಗಬೇಕು, ಇದು ಸರಿಯಲ್ಲ, ಕೂಡಲೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿ ಅಪಘಾತ ನಿಯಂತ್ರಿಸಲು ಸಿಂಗೋನಹಳ್ಳಿ ಗೇಟ್ ಹಾಗೂ ಬ್ಯಾಲದ ಕೆರೆ ಗ್ರಾಮದ ಅಡ್ಡರಸ್ತೆ ಸೇರಿದಂತೆ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಸಂಸದ ಡಾ.ಸಿ.ಎನ್.ಮಂಜುನಾಥ್ ಸಮಸ್ಯೆಗೆ ಸಂಬಂಧಿಸಿದಂತೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು. ತುಮುಲ್ ನಿರ್ದೇಶಕ ಡಿ.ಕೃಷ್ಣಕುಮಾರ್, ಪ್ರಮುಖರಾದ ಪ್ರಮೋದ್, ಮಂಜುನಾಥ, ಸುರೇಶ್, ಗಂಗಾಧರ ಇತರರು ಇದ್ದರು.
Comments are closed.