ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಭೆ ಬಹಿಷ್ಕಾರ

1

Get real time updates directly on you device, subscribe now.


ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳಲ್ಲಿರುವ ಎಸ್ ಸಿ, ಎಸ್ ಟಿ ಸಮುದಾಯಗಳು ವಾಸಿಸುವ ಕಾಲೋನಿಗಳ ನಿವೇಶನ, ಕಟ್ಟಡ, ಆಸ್ತಿ ಸಂಖ್ಯೆ ಕುರಿತು ಜಿಲ್ಲಾ ಮಟ್ಟದ ಕುಂದು ಕೊರತೆ ಸಭೆ ನಿರ್ಣಯದಂತೆ ಮಹಾನಗರ ಪಾಲಿಕೆ ಆಯುಕ್ತರು ದಲಿತ ಸಂಘಟನೆಗಳ ಮತ್ತು ಮುಖಂಡರ ಸಭೆ ಪಾಲಿಕೆಯ ಸಭಾಂಗಣದಲ್ಲಿ ಕರೆದಿದ್ದರು.
ಶುಕ್ರವಾರ ಸಭೆ ಬೆಳಗ್ಗೆ 11.45 ಆದರೂ ಪ್ರಾರಂಭವಾಗಲಿಲ್ಲ, ಆಯುಕ್ತರು ಕಾರ್ಯನಿಮಿತ್ತ ಬೆಂಗಳೂರು ಸಭೆಗೆ ತೆರಳಿದ್ದು ಅವರ ಅನುಪಸ್ಥಿತಿಯಲ್ಲಿ ಕಾಟಾಚಾರಕ್ಕೆ ನಗರ ಪಾಲಿಕೆ ಕಂದಾಯ ಉಪ ಆಯುಕ್ತ ರುದ್ರಮುನಿ, ವಲಯ ಆಯುಕ್ತರಾದ ನಾಗಭೂಷಣ್, ಶಿವಾನಂದ್ ಹಾಜರಾಗಿ ಸರಳ ಖಾತೆ ಮಾಡಲು ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿದರು, ಸಭೆಗೆ ಯಾವುದೇ ಪೂರ್ವ ತಯಾರಿ ಇಲ್ಲದೆ ಕಾಟಾಚಾರಕ್ಕೆ ಈ ಸಭೆ ಕರೆದಿರುವುದು ಎಸ್ ಸಿ, ಎಸ್ ಟಿ ಸಮುದಾಯವನ್ನು ಅಪಮಾನಿಸಿದಂತೆ, ಆಯುಕ್ತರು ಉಪಸ್ಥಿತಿಯಲ್ಲೇ ಕರೆದು 2007ರಲ್ಲಿ ಮತ್ತು 2016-17ರಲ್ಲಿ ಆಗಿರುವ ಕ್ರಿಯಾ ಯೋಜನೆಯಡಿ ಸರಳ ಖಾತೆ ಆಂದೋಲನದ ಮಾಹಿತಿ ಮತ್ತು ಇ-ಸ್ವತ್ತು ಮುಂದುವರೆಸುವ ನಿರ್ಣಯದೊಂದಿಗೆ ಬರಬೇಕೆಂದು ಸಂಘಟನೆಗಳ ಮುಖಂಡರು ಪಟ್ಟು ಹಿಡಿದರು, ಉಪ ಆಯುಕ್ತರ ಬೇಜವಾಬ್ದಾರಿ ಉತ್ತರಕ್ಕೆ ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದು ನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಸಭೆ ಬಹಿಷ್ಕರಿಸಲಾಯಿತು.

ಸಭೆ ಬಹಿಷ್ಕರಿಸಿ ಮಾತನಾಡಿದ ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕ ಎ.ನರಸಿಂಹಮೂರ್ತಿ, ಇಂದಿನ ಸಭೆಗೆ ಎಲ್ಲಾ ಕೆಲಸ ಬಿಟ್ಟು ಮುಖಂಡರು ಬಂದಿದ್ದೇವೆ, 2 ದಶಕಗಳ ನಿರಂತರ ಬೇಡಿಕೆಗೆ ನಗರ ಪಾಲಿಕೆ ತಾರ್ಕಿಕ ಅಂತ್ಯ ನೀಡುತ್ತಿಲ್ಲ, 35 ವಾರ್ಡ್ಗಳಲ್ಲಿ 28ಕ್ಕೂ ಹೆಚ್ಚು ಎಸ್ಸಿ, ಎಸ್ ಟಿ ಕಾಲೋನಿಗಳಿದ್ದು ಇಲ್ಲಿ ಬಹುತೇಕವಾಗಿ ತಾತ ಮುತ್ತಾತರ ಹೆಸರಿನಲ್ಲಿ ಖಾತೆಯಿದ್ದು ಇವುಗಳನ್ನು ಸ್ಥಳ ಪರಿಶೀಲನೆ ಮಾಡಿ ಪೌತಿ ವಾರಸುದಾರಿಕೆ ಮೇರೆಗೆ ವಿಶೇಷ ಪ್ರಕರಣದಡಿಯಲ್ಲಿ ಆಸ್ತಿ ಸಂಖ್ಯೆ ನೀಡಿರುವ ಸ್ವತ್ತನ್ನು ಇ-ಸ್ವತ್ತಿಗೆ ಪರಿವರ್ತಿಸಿ ಕೊಡಬೇಕು, ಒಟ್ಟಾರೆ ಎಸ್ ಸಿ, ಎಸ್ ಟಿಗಳಿಗೆ ಈ ಸಭೆ ಅಪಮಾನಿಸಿದೆ, ಏಕೇಂದರೆ ತುಮಕೂರು ಮಹಾನಗರ ಪಾಲಿಕೆ ನಗರದ ನಾಗರಿಕರಿಗೆ ಸೇವೆ ನೀಡಲು ಇರುವ ಸ್ವಾಯತ್ತ ಸಂಸ್ಥೆ, ಈ ನಾಗರಿಕರಲ್ಲಿ ಎಸ್ ಸಿ, ಎಸ್ ಟಿಗಳು ನಾಗರೀಕರಲ್ಲವೇ? ಹಾಗಾಗಿ ಆಯುಕ್ತರು ಈ ಬಗ್ಗೆ 7 ದಿನಗಳಲ್ಲಿ ಸಭೆ ಕರೆದು ಖುದ್ದು ಈ ಸಮಸ್ಯೆಗೆ ಪರಿಹಾರ ಕಂಡು ಕೊಡಬೇಕೆಂದು ಆಗ್ರಹಿಸಿದರು.

ದಲಿತ ಸಂಘಟನೆಯ ಪಿ.ಎನ್ ರಾಮಯ್ಯ ಮಾತನಾಡಿ, ದಲಿತರ ಕುಂದು ಕೊರತೆ ಸಭೆ ಕರೆದು ಅಧಿಕಾರಿಗಳು ಯಾರು ಸಭೆಗೆ ಬಂದಿರುವುದಿಲ್ಲ, ಇದು ಅಕ್ಷಮ್ಯ, ಇಂತಹ ದಲಿತ ವಿರೋಧಿ ಅಧಿಕಾರಿಗಳ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ರೂಪಿಸಲಾಗುವುದೆಂದು ಆಗ್ರಹಿಸಿದರು.
ಛಲವಾದಿ ಮಹಾಸಭಾದ ರಂಗಯ್ಯ ಮತ್ತು ನಾಗೇಶ್ ಮಾತನಾಡಿ ಎಸ್ ಸಿಪಿ, ಟಿಎಸ್ ಪಿ ಅನುದಾನದಲ್ಲಿ ಅನುಮೋದನೆ ಗೊಂಡಿರುವ ಕಾಮಗಾರಿ ಮಾಡದೇ ನಿರ್ಲಕ್ಷ್ಯವಹಿಸಿದ್ದಾರೆ, ದಲಿತ ಕಾಲೋನಿಗಳಲ್ಲಿ ಹಲವಾರು ಸಮಸ್ಯೆಗಳಿವೆ ಇವುಗಳ ಪರಿಹಾರಕ್ಕೆ ಆಯುಕ್ತರು ಮುಂದಾಗಬೇಕು, ತಪ್ಪಿದಲ್ಲಿ ಪರಿಶಿಷ್ಟ ಜಾತಿ, ಪಂಗಡ ನಿರ್ಲಕ್ಷ್ಯ ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗುವುದೆಂದರು.

ಮಾಜಿ ನಗರಸಭೆ ಉಪಾಧ್ಯಕ್ಷ ಹನುಮಂತರಾಯಪ್ಪ, ದಲಿತ ಸೇನೆಯ ಗಣೇಶ್, ಚರ್ಮ ಕುಶಲಕರ್ಮಿ ಸಂಘದ ಗೋಪಾಲ್, ಅಂಬೇಡ್ಕರ್ ಸಂಘದ ಮೂರ್ತಿ, ಮಾದಿಗ ದಂಡೋರ ಸಂಘಟನೆಯ ಲಕ್ಷ್ಮೀದೇವಮ್ಮ, ತುಮಕೂರು ಸ್ಲಂ ಸಮಿತಿಯ ಅರುಣ್, ಕೃಷ್ಣಮೂರ್ತಿ, ಮನೋಜ್, ಎನ್.ಆರ್.ಕಾಲೋನಿ ಬಾಬು ಜಗಜೀವನ್ರಾಂ ಸಂಘದ ಕಿರಣ್, ಒನಕೆ ಓಬವ್ವನ ಸಂಘದ ವಿಜಯಲಕ್ಷ್ಮೀ, ಛಲವಾದಿ ಮಹಾ ಸಭಾದ ಶೇಖರ್, ಹೆಗ್ಗೆರೆ ಕೃಷ್ಣಮೂರ್ತಿ, ವಿ.ನಾಗೇಶ್ ಮುಂತಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!