ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಲಿ

ತುಮಕೂರು ವಿವಿ ಕಲ್ಪತರು ಉತ್ಸವದಲ್ಲಿ ನಟ ಅನಿರುದ್ಧ್ ಸಲಹೆ

3

Get real time updates directly on you device, subscribe now.


ತುಮಕೂರು: ತುಮಕೂರು ವಿಶ್ವ ವಿದ್ಯಾಲಯದಲ್ಲಿ ಶುಕ್ರವಾರ ಕಲ್ಪತರು ಉತ್ಸವದ ಸಂಭ್ರಮ ಹಬ್ಬದ ವಾತಾವರಣ ಮನೆ ಮಾಡಿತ್ತು, ಸಿನಿಮಾ ತಾರೆಯರಾದ ಅನಿರುದ್ಧ್, ಅನುಷಾರಾಯ್ ಹಾಗೂ ದೀಪಿಕಾ ದಾಸ್ ಉತ್ಸವದ ಮೆರುಗನ್ನು ಹೆಚ್ಚಿಸಿದರು.
ಕಲಾ ತಂಡಗಳ ಮೆರವಣಿಗೆಯಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿ ಸಾಂಪ್ರದಾಯಿಕ ಉಡುಗೆ- ತೊಡುಗೆಗಳೊಂದಿಗೆ ವಿವಿಧ ಕಲಾ ಪ್ರಕಾರ ಪ್ರದರ್ಶಿಸಿದರು, ವೀರಗಾಸೆ, ಯಕ್ಷಗಾನ, ಕೋಲಾಟ, ಡೊಳ್ಳು ಕುಣಿತ ಹೀಗೆ 20ಕ್ಕೂ ಹೆಚ್ಚು ವಿದ್ಯಾರ್ಥಿ ಕಲಾ ತಂಡಗಳು ಭಾಗವಹಿಸಿದ್ದವು, ಮೆರವಣಿಗೆ ತುಮಕೂರು ವಿಶ್ವ ವಿದ್ಯಾಲಯದಿಂದ ಆರಂಭವಾಗಿ ಶಿವಕುಮಾರ ಸ್ವಾಮೀಜಿ ವೃತ್ತದ ಮೂಲಕ ಸಾಗಿತು.

ಚಿತ್ರನಟ ಅನಿರುದ್ಧ್ ಮಾತನಾಡಿ, ನಮ್ಮ ಚಿಂತನೆಗಳು ಯಾವಾಗಲೂ ಸಕಾರಾತ್ಮಕವಾಗಿರಬೇಕು, ವಿದ್ಯೆ ಎಂಬುದು ಶಕ್ತಿಯುತವಾದ ಆಯುಧ, ವಿದ್ಯೆಯನ್ನು ಸಕಾರಾತ್ಮಕವಾದ ಕಾರ್ಯಗಳಿಗೆ ಬಳಸಿಕೊಂಡರೆ ಸಮಾಜದಲ್ಲಿರುವ ಕೊಳಕನ್ನು ತೊಳೆಯ ಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ನಟಿ ಅನುಷಾರಾಯ್ ಮಾತನಾಡಿ, ಯಾರೂ ಕದಿಯಲು ಸಾಧ್ಯವಾಗದ ಎರಡು ವಿಷಯಗಳೆಂದರೆ ವಿದ್ಯೆ ಮತ್ತು ಕಲೆ, ಶಿಕ್ಷಣ ಬದುಕಿಗೆ ಬಹಳ ಮುಖ್ಯವಾದ ಅಂಶ, ವಿದ್ಯಾರ್ಥಿ ಬದುಕು ಜೀವನದ ಒಂದು ದೊಡ್ಡಘಟ್ಟ, ಈ ಹಂತದಲ್ಲಿ ನಿಮ್ಮ ಪ್ರತಿಭೆಗಳನ್ನು ನೀವೇ ಗುರುತಿಸಿಕೊಳ್ಳಬೇಕು ಎಂದರು.
ಮತ್ತೋರ್ವ ನಟಿ ದೀಪಿಕಾ ದಾಸ್ ಮಾತನಾಡಿ, ಶಿಕ್ಷಣದ ಜೊತೆ ಜೊತೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು, ಸಾಂಸ್ಕೃತಿಕ ನಗರ ಎಂದೇ ಪ್ರಸಿದ್ಧವಾದ ಈ ನಾಡಿನಲ್ಲಿ ಹುಟ್ಟಿ ಬೆಳೆದಿರುವಂತಹ ಪ್ರತಿಭೆಗಳು ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಶಿಕ್ಷಣವೆಂಬುದು ಕೇವಲ ಅಕ್ಷರ ಕಲಿಕೆಯಲ್ಲಿ ಮಾತ್ರಇರುವುದಿಲ್ಲ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಿಕೊಳ್ಳಲು ವೇದಿಕೆ ಸೃಷ್ಟಿ ಮಾಡುವುದು ಕೂಡ ಶಿಕ್ಷಣ ಸಂಸ್ಥೆಗಳ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ, ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಯೋಜಕ ಡಾ. ದೇವರಾಜು.ಎಸ್, ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ನಿರ್ದೇಶಕ ಪ್ರೊ.ಬಸವರಾಜು.ಜಿ, ಸಹ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ.ಕೆ.ವಿ, ಕೋರ ಹಾಗೂ ಹ್ಯಾಶ್ ಟ್ಯಾಗ್ ಪಾರು ಪಾರ್ವತಿ ಚಿತ್ರತಂಡ ಭಾಗವಹಿಸಿದ್ದವು.

Get real time updates directly on you device, subscribe now.

Comments are closed.

error: Content is protected !!