ತುಮಕೂರು: ಮಾಧ್ಯಮಗಳು ಯಾವುದೇ ಸುದ್ದಿ ಪ್ರಸಾರಕ್ಕೂ ಮುನ್ನ ಸತ್ಯಾಸತ್ಯತೆ ಪರಾಮರ್ಶೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರಿಗೆ ಕರೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಹಾಗೂ ಜಿಲ್ಲಾ ಘಟಕದ ಆಶ್ರಯದಲ್ಲಿ ಸಿದ್ಧಾರ್ಥ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪತ್ರಿಕೋದ್ಯಮ ವೃತ್ತಿಯಾಗಿರಬೇಕು, ಉದ್ಯಮವಾಗಬಾರದು, ಪತ್ರಿಕಾ ವರದಿಗಳು ವೃತ್ತಿಪರವಾಗಿದ್ದಾಗ ಸಮಾಜದ ಸುಧಾರಣೆ ಸಾಧ್ಯ, ಪತ್ರಿಕಾ ವೃತ್ತಿ ಉದ್ಯಮವಾದ ಕೂಡಲೇ ಉದ್ದೇಶಗಳು ಬದಲಾಗುತ್ತವೆ, ವಸ್ತು ಸ್ಥಿತಿ ಜೊತೆಗೆ ಮೌಲ್ಯಾಧಾರಿತ ಸುದ್ದಿ ಇಂದಿನ ಅಗತ್ಯ, ಊಹಾ (ಕಲ್ಪಿತ) ಪತ್ರಿಕೋದ್ಯಮ ಅಪಾಯಕಾರಿ ಎಂದು ತಿಳಿಸಿದರು.
ನಿಮ್ಮ ವಿಶೇಷ ಸಂಚಿಕೆ ನೀವೂ ಓದಿ, ಈಗ ವೇದಿಕೆಯಲ್ಲಿ ಬಿಡುಗಡೆಯಾದ ನಿಮ್ಮದೇ ವಿಶೇಷ ಸಂಚಿಕೆ ನೀವೂ ಓದಿ, ಪತ್ರಕರ್ತರ ಕರ್ತವ್ಯ, ಸವಾಲುಗಳ ಪಟ್ಟಿ ಇದೆ, ಅದನ್ನು ಓದಿ, ಪಾಲಿಸಿ ಎಂದರು.
ಜನ ಪತ್ರಕರ್ತರ ಮೇಲೆ ನಂಬಿಕೆ ಇಟ್ಟಿದ್ದಾರೆ, ಮೌಢ್ಯದ ಸುದ್ದಿ, ಚರ್ಚೆಗಳನ್ನು ನಡೆಸಿ ನೋಡುಗರ, ಓದುಗರ ದಾರಿ ತಪ್ಪಿಸಬೇಡಿ, ವರದಿಗಳು ಮೌಢ್ಯ, ಕಂದಾಚಾರಗಳಿಗೆ ಪ್ರೋತ್ಸಾಹ ನೀಡುವಂತಿರಬಾರದು, ವೈಚಾರಿಕತೆಯಿಂದ ಕೂಡಿರಬೇಕು ಹಾಗೂ ವಸ್ತು ನಿಷ್ಠವಾಗಿರಬೇಕು, ಪತ್ರಕರ್ತರು ಸತ್ಯಶೋಧನೆ ಗುಣಧರ್ಮವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಜ್ಞಾನ, ತಂತ್ರಜ್ಞಾನದ ವೇಗದಲ್ಲೇ ಪತ್ರಿಕೋದ್ಯಮ ಬೆಳೆಯುತ್ತಿರುವುದು ಬರಹಗಾರರಿಗೆ ಅವಕಾಶಗಳು ಹೆಚ್ಚಾಗುತ್ತಿವೆಯಲ್ಲದೆ, ಸವಾಲುಗಳೂ ನಿರ್ಮಾಣವಾಗುತ್ತಿವೆ ಎಂದು ತಿಳಿಸಿದರಲ್ಲದೆ, ದೇಶದ ಪ್ರತಿಯೊಬ್ಬರೂ ಸಂವಿಧಾನ ಓದಬೇಕು, ಆಗ ಮಾತ್ರ ಹಕ್ಕು- ಕರ್ತವ್ಯಗಳ ಬಗ್ಗೆ ಅರಿವಾಗುತ್ತದೆ, ನಿಮ್ಮದು ಶಕ್ತಿಯುತ ಮಾಧ್ಯಮ, ಜನ ನಿಮ್ಮ ಕಡೆ ನೋಡ್ತಾ ಇದ್ದಾರೆ, ಈ ಎಚ್ಚರಿಕೆ ಸದಾ ಇರಲಿ ಎಂದರು.
Comments are closed.