ತುಮಕೂರು: ದೇಶ ಹಾಗೂ ಸಂಸ್ಕೃತಿಗೆ ದ್ರೋಹಿಯಾಗಿ ಬದುಕುವುದಕ್ಕಿಂತ ದೇಹಿಯಾಗಿ ಬದುಕುವುದೇ ಲೇಸು, ನಾಡು, ನೆಲ, ಸಂಸ್ಕೃತಿ, ಭಾಷೆ, ದೇಶ ಮರೆತರೆ ಅದಕ್ಕಿಂತ ದೊಡ್ಡ ದೇಶ ದ್ರೋಹ ಮತ್ತೊಂದಿಲ್ಲ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ಅಭಿಪ್ರಾಯಪಟ್ಟರು.
ತುಮಕೂರು ವಿಶ್ವ ವಿದ್ಯಾಲಯದ ಪ್ರೇರಣಾ ಉಪನ್ಯಾಸ ಮಾಲೆಯ ಅಂಗವಾಗಿ ಸೋಮವಾರ ಭಾಷೆ, ಸಂಸ್ಕೃತಿ ಮತ್ತು ಯುವ ಜನತೆ ಕುರಿತು ಮಾತನಾಡಿ, ಜಗತ್ತಿನ ಎಲ್ಲಾ ದೇಶಗಳ ಹುಟ್ಟಿದ ದಿನಾಂಕವನ್ನು ಗುರುತಿಸಲು ಸಾಧ್ಯವಿದೆ, ಆದರೆ ಭಾರತ ದೇಶಕ್ಕೆ ಮಾತ್ರ ಹುಟ್ಟಿನ ದಿನಾಂಕವಿಲ್ಲ, ಯಾವ ದೇಶಕ್ಕೆ ಹುಟ್ಟಿನ ದಿನಾಂಕವಿರುವುದಿಲ್ಲವೋ ಆ ದೇಶಕ್ಕೆ ಸಾವಿನ ದಿನಾಂಕವೂ ಇರುವುದಿಲ್ಲ, ಸನಾತನ ಭಾರತಕ್ಕೆ ಅಷ್ಟು ಆಳವಾದ ಇತಿಹಾಸವಿದೆ ಎಂದರು.
ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ವಿಶ್ವ ವಿದ್ಯಾಲಯದ ಆಶಯ ಅರ್ಥ ಮಾಡಿಕೊಂಡು ವಿಶ್ವ ಮಾನವತೆ ರೂಢಿಸಿಕೊಳ್ಳಬೇಕು, ವಿಜ್ಞಾನಿ ಬುದ್ಧಿ, ತತ್ವಜ್ಞಾನಿ ಮನಸ್ಸು ಹಾಗೂ ಕವಿ ಹೃದಯ ಬೆಳೆಸಿಕೊಂಡರೆ ಬದುಕು ಹಸನಾಗುತ್ತದೆ ಎಂದರು.
ತಾಯಿ, ತಾಯ್ನಾಡು, ತಂದೆ, ತಾಯ್ನುಡಿ- ಈ ನಾಲ್ಕನ್ನುಜೀವನದಲ್ಲಿ ಮರೆಯಬೇಡಿ, ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಂಸ್ಕೃತಿಯುವ ಜನಾಂಗದ್ದು ಆಗಬಾರದು, ಸಾಧಕರ ಜೀವನ ಚರಿತ್ರೆ ಓದಿ ಅದರಿಂದ ಪ್ರೇರಣೆ ಪಡೆಯುವುದನ್ನು ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬೀಗುವುದು ಬದುಕಲ್ಲ, ಬಾಗುವುದು ಬದುಕು, ನಾವು ಬಾಳೆಯಂತೆ ಬಾಗಬೇಕು, ಭಾಷೆ ಸಂವಹನಕ್ಕೆ ತೊಡಕಾಗಬಾರದು, ಭಾಷೆಗಿಂತ ಭಾವನೆ ಮುಖ್ಯ, ಅನುಕಂಪ, ಕಾಳಜಿ, ಪ್ರೀತಿ ಮತ್ತು ಸಹಕಾರ ನಮ್ಮ ಬದುಕಿನ ಧ್ಯೇಯವಾಗಬೇಕು ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪಾವಗಡ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜಿ ಮಹಾರಾಜ್, ಕನ್ನಡ ಮಾತನಾಡಲು ಕಷ್ಟ ಪಡುವ ನಾವು ನವೆಂಬರ್ ಕನ್ನಡಿಗರಾಗಿದ್ದೇವೆ, ಮೊದಲು ನಮ್ಮ ದೇಶವನ್ನು ಪ್ರೀತಿಸಬೇಕು, ರಾಷ್ಟ್ರೀಯತೆ, ಜೀವನ, ಧರ್ಮದ ಮೂಲಗಳನ್ನು ಅರಿಯಬೇಕು ಎಂದರು.
ವಿವೇಕಾನಂದರ ವಿಚಾರಗಳಿಂದ ಎಷ್ಟೋ ಜನ ಭಾರತದ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದಾರೆ, ವಿವೇಕಾನಂದರ ಧ್ಯೇಯಗಳನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಭವ್ಯ ಭಾರತದ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸುವ ಉದ್ದೇಶದಿಂದ ಪ್ರೇರಣಾ ಉಪನ್ಯಾಸ ಮಾಲೆ ಆರಂಭಿಸಲಾಗಿದೆ, ಅಂಕ ಮತ್ತು ಪದವಿಗಳಿಂದ ಮಾತ್ರ ಜೀವನ ಸಾರ್ಥಕವಾಗುವುದಿಲ್ಲ, ಯಾವುದೇ ಕೆಲಸವನ್ನು ಶ್ರದ್ಧೆಯಿಂದ, ನಿಷ್ಠೆಯಿಂದ ಮಾಡಿದರೆ ಮಾತ್ರಯಶಸ್ಸು ಸಾಧ್ಯ ಎಂದರು.
ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ಜಮ್, ಮೌಲ್ಯಮಾಪನ ಕುಲಸಚಿವ ಪ್ರೊ.ಪ್ರಸನ್ನಕುಮಾರ್.ಕೆ, ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರೊ.ಬಿ.ರವೀಂದ್ರಕುಮಾರ್, ಡಾ.ಸಿಬಂತಿ ಪದ್ಮನಾಭ.ಕೆ.ವಿ, ಡಾ.ಅರುಣ್ಕುಮಾರ್ ಇತರರು ಇದ್ದರು.
Comments are closed.