ವೈದ್ಯ ಶಾಸಕ, ವೈದ್ಯ ಸಂಸದರು ಇತ್ತ ಗಮನಿಸಲಿ

10

Get real time updates directly on you device, subscribe now.


ಕುಣಿಗಲ್: 108 ತುರ್ತು ವಾಹನದ ಸಿಬ್ಬಂದಿ ಚೆಲ್ಲಾಟದಿಂದಾಗಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಒಂದುವರೆ ಗಂಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರದಾಡುವಂತಾದ ಘಟನೆ ಬುಧವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದ್ದು, 108 ವಾಹನ ಸಿಬ್ಬಂದಿ ಕ್ರಮ ಖಂಡಿಸಿ ಸಾರ್ವಜನಿಕರು ವಾಹನ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ತಾಲೂಕನ್ನು ಪ್ರತಿನಿಧಿಸುವ ವೈದ್ಯ ಶಾಸಕ, ವೈದ್ಯ ಸಂಸದರು ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

ಮೈಕ್ರೋ ಫೈನಾನ್ಸ್‌ ಸಂಸ್ಥೆಯಲ್ಲಿ ಕೆಲಸ ಮಾಡುವ ಮಂಗಳಮ್ಮ ಎಂಬಾಕೆ ಸಂಸ್ಥೆ ಸಿಬ್ಬಂದಿಯೊಂದಿಗೆ ಬೈಕ್‌ನಲ್ಲಿ ಬರುವಾಗ ಸೊಲೂರು ಬಳಿ ಅಪಘಾತವಾಗಿ ಗಾಯಗೊಂಡರು, ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದು ಸ್ಥಳೀಯ ವೈದ್ಯರು ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ಸ್ಕ್ಯಾನಿಂಗ್‌ಗೆ ಕರೆದೊಯ್ಯುವಂತೆ ಸೂಚಿಸಿದರು, ಗಾಯಾಳುವಿನೊಂದಿಗೆ ಆಗಮಿಸಿದ್ದವರು 108 ವಾಹನಕ್ಕೆ ಕರೆ ಮಾಡಿದ್ದು ಸದರಿ ಸಿಬ್ಬಂದಿ ಕರೆಯನ್ನು ಸ್ವೀಕರಿಸಿ ಕಾಯುವಂತೆ ಸೂಚನೆ ನೀಡಿದ್ದಾರೆ, ಆದರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 108 ತುರ್ತು ವಾಹನ, ಎರಡು ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್‌ ಲಭ್ಯವಿದ್ದವು, ಆಸ್ಪತ್ರೆ ಆವರಣದಲ್ಲಿ 108 ವಾಹನ ನಿಂತಿದ್ದರೂ ಸದರಿಯವರು ಯಡಿಯೂರಿನಿಂದ ಕಳಿಸುತ್ತೇವೆ ಎಂದು ಸಬೂಬು ಹೇಳಿಕೊಂಡು ಒಂದು ಗಂಟೆ ಕಾಲಹರಣ ಮಾಡಿದರು.
ಗಾಯಾಳು ಕಡೆಯವರ ಪರದಾಟ ನೋಡಿದ ಸ್ಥಳೀಯ ನಾಗರಿಕರು ಸಹ 108 ವಾಹನ ಸಿಬ್ಬಂದಿ ಕ್ರಮ ಖಂಡಿಸಿ ಸ್ಥಳದಲ್ಲಿದ್ದ 108 ಸಿಬ್ಬಂದಿ ಸುರೇಶ್, ಶೇಖರ್ ಇವರನ್ನು ತರಾಟೆಗೆ ತೆಗೆದುಕೊಂಡರು, ಗಾಯಾಳುವಿನ ಜೀವ ಹೋಗುತ್ತಿದೆ ಎಂದರೂ ನೀವು ಸ್ಪಂದಿಸುತ್ತಿಲ್ಲ, 108 ಆನ್‌ಲೈನ್ ಸಿಬ್ಬಂದಿ ನೋಡಿದರೆ ಒಂದು ಗಂಟೆಯಿಂದಲೂ ಯಡಿಯೂರಿನಿಂದ ಕಳಿಸುತ್ತೇವೆ ಅನ್ನುತ್ತಿದ್ದಾರೆ, ರೋಗಿಗಳ ಜೀವದೊಂದಿಗೆ ಚೆಲ್ಲಾಟ ವಾಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

108 ವಾಹನದ ಸಿಬ್ಬಂದಿ ಸುರೇಶ್, 12 ಗಂಟೆ ಕೆಲಸ ಮಾಡಿಸುತ್ತಾರೆ, ಹೆಚ್ಚುವರಿ ಸಿಬ್ಬಂದಿ ನೀಡುವುದಿಲ್ಲ, ಸಂಬಳ ಕೊಡುವುದಿಲ್ಲ, ಕೇಳಿದರೆ ಕೆಲಸಕ್ಕೆ ಬೇಡ ಎಂದಿದ್ದಾರೆ, ನಮಗೆ ರೂಟ್ ಕೊಡದೆ ಏನು ಮಾಡಲಾಗದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ವೇಳೆ ಸ್ಥಳದಲ್ಲಿದ್ದ ವಾಸಣ್ಣ, ಸೈಯದ್, ಜಿಲ್ಲಾಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ವಿವರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಈ ಹಂತದಲ್ಲಿ ವಿಶ್ವಣ್ಣ ಸೇರಿದಂತೆ ಕೆಲವರು ಕ್ರಮ ಖಂಡಿಸಿ 108 ವಾಹನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ ನಿಮ್ಮ ಮನೆಗಳಲ್ಲಿ ಹೀಗೆ ಆಗಿದ್ದರೆ, ಕೆಲಸದ ನೆಪ ರೂಟ್ ಅಲಾಟ್ ಕಥೆ ಹೇಳುತ್ತಿದ್ದೀರಾ, ನಾಚಿಕೆ ಆಗೊಲ್ವೆ ಎಂದು ಜಗಳಕ್ಕೆ ಇಳಿದರು, ಈ ವೇಳೆ ಸ್ಥಳೀಯ ಆಸ್ಪತ್ರೆ ಸಿಬ್ಬಂದಿಯೆ ಗಾಯಾಳು ಸಾಗಿಸಲು ಆ್ಯಂಬುಲೆನ್ಸ್‌ ಮುಂದಾದಾಗ ಸಾರ್ವಜನಿಕರ ತೀವ್ರ ಪ್ರತಿರೋಧಕ್ಕೆ ಹೆದರಿದ 108 ಸಿಬ್ಬಂದಿ ಒಂದುವರೆ ತಾಸಿನ ನಂತರ ಗಾಯಾಳುವನ್ನು ತುಮಕೂರಿಗೆ ಸಾಗಿಸಿದರು.

Get real time updates directly on you device, subscribe now.

Comments are closed.

error: Content is protected !!