ತುಮಕೂರು: ಹೆಣ್ಣು ಮಕ್ಕಳ ಅಸಹಾಯಕತೆ ದುರುಪಯೋಗ ಪಡಿಸಿಕೊಳ್ಳುವ ವ್ಯಕ್ತಿಗಳು ಹೆಚ್ಚುತ್ತಿದ್ದು, ಈ ಬಗ್ಗೆ ಹೆಣ್ಣು ಮಕ್ಕಳು ಹೆಚ್ಚು ಜಾಗರೂಕರಾಗಿರಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ನ್ಯಾಯಾಧೀಶರಾದ ನೂರುನ್ನಿಸಾ ಎಚ್ಚರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಬಾಲ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಹದಿಹರೆಯ ಹೆಣ್ಣು ಮಕ್ಕಳ ಸಾಮಾಜಿಕ ಸಮಸ್ಯೆ- ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬಹಳಷ್ಟು ಪ್ರಕರಣಗಳಲ್ಲಿ ಹೆಣ್ಣು ಮಕ್ಕಳ ಮುಗ್ಧತೆ ಮತ್ತು ಅಸಹಾಯಕತೆಯನ್ನು ಕೆಲವರು ದುರುಪಯೋಗ ಪಡಿಸಿಕೊಂಡಿರುವುದು ಕಂಡುಬರುತ್ತಿದೆ, ಇದಕ್ಕೆ ಆಸ್ಪದ ಕೊಡಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಆರ್.ಜೆ.ಪವಿತ್ರ ಮಾತನಾಡಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ಮಕ್ಕಳು ಮಾಡುವ ತಪ್ಪಿನಿಂದಾಗಿ ಪೋಷಕರು ಪರಿತಪಿಸುತ್ತಿದ್ದಾರೆ, ಯಾವ ಪೋಷಕರೂ ಮಕ್ಕಳ ಬಗ್ಗೆ ಕೆಟ್ಟದ್ದು ಬಯಸುವುದಿಲ್ಲ, ಆದರೆ ಪೋಷಕರನ್ನೇ ಮಕ್ಕಳು ವಿಲನ್ ರೀತಿಯಲ್ಲಿ ಕಾಣುತ್ತಿದ್ದಾರೆ, ಹದಿಹರೆಯದ ಈ ಅವಧಿಯಲ್ಲಿ ಶಿಕ್ಷಣವೇ ಮುಖ್ಯವಾಗಬೇಕು, ಅದಕ್ಕಾಗಿ ಓದಬೇಕು, ಪುಸ್ತಕಗಳೇ ನಮ್ಮ ಗೆಳೆಯರಾಗಬೇಕು, ಈಗ ಕತ್ತು ಬಗ್ಗಿಸಿ ಓದಿದರೆ ಮುಂದೆ ತಲೆಎತ್ತಿ ಓಡಾಡಬಹುದು ಎಂದು ಸಲಹೆ ನೀಡಿದರು.
ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ಡಾ.ಶ್ರೀನಿವಾಸ ಪ್ರಸಾದ್ ಮಾತನಾಡಿ 9 ರಿಂದ 14 ವರ್ಷದೊಳಗಿನ ಅವಧಿ ಅತ್ಯಂತ ಪ್ರಮುಖ ಘಟ್ಟ, ಹಾರ್ಮೋನ್ ಗಳು ಬದಲಾವಣೆ ಹೊಂದುತ್ತವೆ, ಈ ಅವಧಿಯಲ್ಲಿ ನಕಾರಾತ್ಮಕ ಚಿಂತನೆಗಳು ಹೆಚ್ಚುತ್ತವೆ, ವಿರುದ್ಧ ದಿಕ್ಕಿನ ಲಿಂಗತ್ವದ ಕಡೆಗೆ ಆಕರ್ಷಣೆ ಹೆಚ್ಚುತ್ತದೆ, ಆದರೆ ಒಂದನ್ನು ನೆನಪಿಟ್ಟುಕೊಳ್ಳಬೇಕು, ಈ ಅವಧಿಯಲ್ಲಿ ಮೂಡುವುದು ಕ್ಷಣಿಕ ಆಕರ್ಷಣೆಯೇ ಹೊರತು ನಿಜವಾದ ಪ್ರೀತಿಯಲ್ಲ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಮಾಜಿ ಸದಸ್ಯ, ವಕೀಲ ಸಾ.ಚಿ.ರಾಜಕುಮಾರ ಮಾತನಾಡಿ, ಕಳೆದ 100 ವರ್ಷಗಳ ಹಿಂದಿನ ಸಮಾಜವನ್ನು ಅವಲೋಕಿಸಿದರೆ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯವೇ ಇರಲಿಲ್ಲ, ಸತಿ ಸಹಗಮನ, ಬಾಲ್ಯ ವಿವಾಹದಂತಹ ಹಲವು ಅನಿಷ್ಠಗಳು ಮನೆ ಮಾಡಿದ್ದವು, ಈಗ ಕಾಲ ಸಂಪೂರ್ಣ ಬದಲಾಗಿದೆ, ಹಲವು ಹಕ್ಕುಗಳು ಪ್ರಾಪ್ತವಾಗಿವೆ, ಅದರ ಜೊತೆಯಲ್ಲೇ ಅಸುರಕ್ಷಿತ ವಾತಾವರಣವೂ ಹೆಚ್ಚುತ್ತಿದೆ, ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದರು.
ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ದಿನೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲೋಕೇಶ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹಿರಿಯ ಪತ್ರಕರ್ತ ಮಲ್ಲೇಶ್, ಬಾಲ ಭವನದ ಸಂಯೋಜಕಿ ಮಮತ ಇತರರು ಇದ್ದರು.
Comments are closed.