ಜನರಿಗೆ ಸ್ಥಳೀಯ ಸಂಸ್ಥೆಗಳು ಸೌಲಭ್ಯ ಕಲ್ಪಿಸಲಿ

7

Get real time updates directly on you device, subscribe now.


ತುಮಕೂರು: ಸ್ಥಳೀಯ ಸಂಸ್ಥೆಗಳಿಗೆ ಕಾಲ-ಕಾಲಕ್ಕೆ ಚುನಾವಣೆಗಳು ನಡೆದಾಗ ಮಾತ್ರ ಹಣಕಾಸು ಆಯೋಗ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣ ಸ್ವಾಮಿ ತಿಳಿಸಿದರು.
ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ 5ನೇ ರಾಜ್ಯ ಹಣಕಾಸು ಆಯೋಗದ ವಿಷಯಗಳ ಕುರಿತು ಜಿಲ್ಲಾ ಪಂಚಾಯತಿಯಲ್ಲಿ ಬುಧವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಹಣಕಾಸು ಆಯೋಗವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡುವ ಸಂದರ್ಭದಲ್ಲಿ ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಹಂಚಿಕೆ ಮಾಡಲಿದೆ ಎಂದು ತಿಳಿಸಿದರು.
ತುರುವೇಕೆರೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸ್ವಪ್ನ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿಗಳ ಕೊರತೆಯಿದ್ದು, ಜನಸಂಖ್ಯೆಗನುಗುಣವಾಗಿ ಸಿಬ್ಬಂದಿ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಬಿಡುಗಡೆ ಮಾಡುವ ಅನುದಾನ ಸಾಕಾಗುವುದಿಲ್ಲ, ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ಆಯೋಗಕ್ಕೆ ಮನವಿ ಮಾಡಿದರು.
ಗುಬ್ಬಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ ಮಾತನಾಡಿ, ಗುಬ್ಬಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೀದಿ ನಾಯಿಗಳನ್ನು ನಿಯಂತ್ರಿಸಲು ಸ್ಥಳೀಯ ಸಂಸ್ಥೆಗೆ ಕಷ್ಟಸಾಧ್ಯವಾಗಿದೆ, ಗುಬ್ಬಿ ಪಟ್ಟಣ ಪಂಚಾಯತಿಯಲ್ಲಿ ಪೌರ ಕಾರ್ಮಿಕರ ಸಂಖ್ಯೆಯೂ ಕಡಿಮೆಯಿದ್ದು, ಪಟ್ಟಣದ ಸ್ವಚ್ಛತೆ ಕಾಪಾಡಲು ಸಮಸ್ಯೆ ಉಂಟಾಗಿದೆ, ಇಂಜಿನಿಯರ್ಗಳಿಗೆ ಎರಡೆರಡು ನಗರ ಸ್ಥಳೀಯ ಸಂಸ್ಥೆಗಳ ಕರ್ತವ್ಯ ನಿಭಾಯಿಸಲು ನಿಯೋಜಿಸಿರುವುದರಿಂದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿಳಂಬವಾಗುತ್ತಿದ್ದು, ಶೀಘ್ರವೇ ಖಾಲಿ ಹುದ್ದೆಗಳ ನೇಮಕಕ್ಕೆ ಕ್ರಮಕೈಗೊಳ್ಳಬೇಕೆಂದು ಆಯೋಗಕ್ಕೆ ಮನವಿ ಮಾಡಿದರು.
ನಂತರ 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಪಡೆದ ಸಲಹೆಗಳನ್ನು ಅಂತಿಮ ವರದಿಯಲ್ಲಿ ದಾಖಲಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಗ್ರಾಮ ಪಂಚಾಯತಿಗಳ ಆದಾಯ ಹೆಚ್ಚಿಸಲು ತೆರಿಗೆ ವಸೂಲಾತಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ, ಆನ್ಲೈನ್ ಸೇವೆಗಳಿಂದ ತೆರಿಗೆ ವಸೂಲಾತಿ ಪಾರದರ್ಶಕವಾಗಿ ನಡೆಯುತ್ತಿದೆ. ತೆರಿಗೆ ವಸೂಲಾತಿಯನ್ನು ಪಂಚ ತಂತ್ರ 2.0 ತಂತ್ರಾಂಶದಲ್ಲಿ ಅನುಷ್ಠಾನ ಗೊಳಿಸುತ್ತಿರುವುದರಿಂದ ತೆರಿಗೆ ಲೆಕ್ಕಾಚಾರ ಸರಳಗೊಂಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಆಯೋಗದ ಸದಸ್ಯರಾದ ಮೊಹಮದ್ ಸನಾವುಲ್ಲಾ, ಆರ್.ಎಸ್.ಪೋಂಡೆ, ಕಾರ್ಯದರ್ಶಿ ಉಜ್ವಲ್ ಕುಮಾರ್ ಘೋಷ್, ಸಮಾಲೋಚಕರಾದ ಎಂ.ಕೆ. ಕೆಂಪೇಗೌಡ ಹಾಗೂ ಜಿ. ಸುಪ್ರಸನ್ನ, ಅಧ್ಯಕ್ಷರ ಆಪ್ತಕಾರ್ಯದರ್ಶಿ ಯಾಲಕ್ಕಿಗೌಡ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!