ಕೊಡಿಗೇನಹಳ್ಳಿ: ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರೋಗ ರುಜಿನಗಳಿಗೆ ತುತ್ತಾಗುವ ಭೀತಿ ಎದುರಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಪುರವರ ಗ್ರಾಪಂಗೆ ಸೇರಿದ ದೊಡ್ಡ ಹೊಸಹಳ್ಳಿ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಚರಂಡಿ ನೀರು ಮನೆಗಳ ಮುಂಭಾಗದಲ್ಲಿ ನಿಲ್ಲುತ್ತಿದ್ದು ಚರಂಡಿಗಳು ತುಂಬಿ ತುಳುಕುತ್ತಿವೆ, ಇದರಲ್ಲಿ ಹುಳಗಳು ಉತ್ಪತಿಯಾಗಿ ಸಾಂಕ್ರಾಮಿಕ ರೋಗಳ ಭೀತಿ ಎದುರಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಡಿ ವ್ಯವಸ್ಥೆ ಕಲ್ಪಿಸಲು ಜನ ಪ್ರತಿನಿಧಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ, ಬಹುತೇಕ ಈ ಭಾಗದಲ್ಲಿ ದಲಿತ ಕುಟುಂಬಗಳೇ ವಾಸವಿದ್ದು ಸಾಂಕ್ರಾಮಿಕ ರೋಗಕ್ಕೆ ತುತ್ತಾದರೆ ಚಿಕಿತ್ಸೆಗೆ ತೆರಳಲು ಹಣವಿಲ್ಲದಂತಾಗಿದೆ, ಈಗಾಗಲೇ ಸುಮಾರು ಜನ ಜ್ವರ ಮತ್ತು ನೆಗಡಿಯಿಂದ ಚಿಕಿತ್ಸೆ ಪಡೆಯುತ್ತಿದ್ದು ನಮ್ಮ ಆರೋಗ್ಯ ಬಗ್ಗೆ ಗ್ರಾಪಂ ಅಧಿಕಾರಿಗಳಿಗೆ ಕಾಳಜಿ ಇಲ್ಲದಂತಾಗಿದೆ.
ಸರಕಾರ ಎಸ್ಸಿಪಿಟಿಎಸ್ಪಿ ಅನುದಾನ ನೀಡುತಿದ್ದರೂ ಅಧಿಕಾರಿಗಳು ಸಮರ್ಪಕವಾಗಿ ದಲಿತ ಕೇರಿಗಳ ಅಭಿವೃದ್ಧಿಗೆ ವಿನಿಯೋಗಿಸುವಲ್ಲಿ ವಿಫಲರಾಗಿದ್ದಾರೆ, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾರದಮ್ಮ, ಕೊಟಮ್ಮ, ಲಕ್ಷ್ಮಮ್ಮ, ಕರಿಯಮ್ಮ, ನೇತ್ರಾವತಿ, ಲಕ್ಷ್ಮಿ ಒತ್ತಾಯಿಸಿದ್ದಾರೆ.
Comments are closed.