ಆರ್ಥಿಕ ನಷ್ಟ ನಿವಾರಿಸಲು ನಿವೃತ್ತ ನೌಕರರ ಆಗ್ರಹ

2

Get real time updates directly on you device, subscribe now.


ತುಮಕೂರು: ರಾಜ್ಯ ಸರ್ಕಾರದ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿ 1.7.2022 ರಿಂದ 31.7.24 ರ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ 7ನೇ ಆಯೋಗದ ವರದಿಯ ವೇತನದಂತೆ ಆರ್ಥಿಕ ಸೌಲಭ್ಯ ನೀಡಬೇಕು, ಈ ಬಗ್ಗೆ ಬರುವ ಬಜೆಟ್ ನಲ್ಲಿ ಹೆಚ್ಚುವರಿ ಹಣ ಮೀಸಲಿಡಬೇಕು ಎಂದು ಜಿಲ್ಲೆಯ ನಿವೃತ್ತ ನೌಕರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದ ನಿವೃತ್ತರ ಮಹಾಮನೆ ಸಭಾಂಗಣದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ತಹಶೀಲ್ದಾರರ ಕಚೇರಿಗೆ ತೆರಳಿ ತಹಶೀಲ್ದಾರ್ ರಾಜೇಶ್ವರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ನೀಡಿದರು.
ಈ ವೇಳೆ ಮಾತನಾಡಿದ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಸಂಚಾಲಕ ಚಂದ್ರಶೇಖರ್, 1.7.2022 ರಿಂದ 31.7.24ರ ಅವಧಿಯಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಏಳನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭಲ್ಲಿ ಆರ್ಥಿಕ ನಷ್ಟವಾಗಿದೆ, ಸದರಿ ವೇತನ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್ಜಿ, ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸ ಮೊತ್ತ ಕೊಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ನಮ್ಮ ಬೇಡಿಕೆಗಳ ಬಗ್ಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ನಿವೃತ್ತ ನೌಕರರು ಸಮಾವೇಶಗೊಂಡು ಸರ್ಕಾರಕ್ಕೆ ಮನವಿ ಮಾಡಿದ್ದೆವು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನಮ್ಮ ಮನವಿ ಸ್ವೀಕರಿಸಿ ನಮ್ಮ ವೇದಿಕೆ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿ ಚರ್ಚೆ ಮಾಡಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು, ಆದರೆ ಇದೂವರೆಗೂ ಸರ್ಕಾರ ಸಭೆಯನ್ನೂ ಕರೆಯಲಿಲ್ಲ, ಬೇಡಿಕೆಯನ್ನೂ ಈಡೇರಿಸಿಲ್ಲ, ಬರುವ ಬಜೆಟ್ ನಲ್ಲಿ ಸರ್ಕಾರ ಹೆಚ್ಚುವರಿ ಅನುದಾನ ಮೀಸಲಿಟ್ಟು ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

7ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಆಗಿರುವ ಆರ್ಥಿಕ ನಷ್ಟದ ಬೇಡಿಕೆ ಈಡೇರಿಸುವ ದಿಸೆಯಲ್ಲಿ ಒಂದು ವಾರದೊಳಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ನಮ್ಮ ವೇದಿಕೆಯ ಮುಖಂಡರ ಸಭೆ ಏರ್ಪಡಿಸಬೇಕು ಹಾಗೂ ಬರುವ ಬಜೆಟ್ನಲ್ಲಿ ಹೆಚ್ಚುವರಿ ಅನುದಾನ ಮೀಸಲಿಟ್ಟು ನಮ್ಮ ಆರ್ಥಿಕ ನಷ್ಟ ನಿವಾರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಚಂದ್ರಶೇಖರ್ ಮನವಿ ಮಾಡಿದರು.
ಮುಖಂಡರಾದ ಎಂ.ಆರ್.ಶಿವಣ್ಣ, ಟಿ.ಆರ್.ಚಿಕ್ಕಣ್ಣ, ಎಂ.ಜಿ.ನರಸಿಂಹಯ್ಯ, ಕೆ.ಸಿದ್ದಯ್ಯ, ಸೋಮಶೇಖರ್, ಶೈಲಜಾ, ಶಿವರಾಜ್, ಕರಿಗಿರಯ್ಯ ಮೊದಲಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!