ಪಟ್ಟನಾಯಕನ ಹಳ್ಳಿ: ಹಸುಗಳ ಸಾಕಾಣಿಕೆ ಮಾಡಿ ಪ್ರತಿದಿನ 150 ಲೀಟರ್ ಹಾಲು ಸಂಗ್ರಹಣೆ ಮಾಡುವ ಸಾಮರ್ಥ್ಯ ಹೊಂದಿರುವ ಶಿರಾ ತಾಲೂಕಿನ ಪ್ರತಿಯೊಂದು ಹಳ್ಳಿಯಲ್ಲೂ ಹಾಲು ಉತ್ಪಾದಕರ ಸಂಘ ಸ್ಥಾಪನೆ ಮಾಡಿ ಹೈನುಗಾರಿಕೆ ಪ್ರೋತ್ಸಾಹಿಸಿ ಬಡ ರೈತ ಕುಟುಂಬಗಳ ಆರ್ಥಿಕ ಪ್ರಗತಿಗೆ ಆದ್ಯತೆ ನೀಡುವುದೇ ನನ್ನ ಗುರಿ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.
ಶಿರಾ ತಾಲೂಕಿನ ಮೇಲ್ಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮನಹಳ್ಳಿ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ, ಹಾಲಿನ ಉತ್ಪಾದನೆ ಹೆಚ್ಚಾದಂತೆ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ಅವಶ್ಯಕತೆ ಇದ್ದು ನಂದಿನಿ ಹಾಲು ದೇಶದಲ್ಲಿಯೇ ಗುಣಮಟ್ಟದ ಹಾಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು , ನಂದಿನಿ ಸಾವಿರಾರು ರೈತ ಕುಟುಂಬಗಳ ಜೀವನಾಡಿಯಾಗಿದೆ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕನಾಗಿ ಕಳೆದ ಹತ್ತು ವರ್ಷಗಳಿಂದ ಉತ್ಪಾದಕರ ಧ್ವನಿಯಾಗಿ ಕೆಲಸ ಮಾಡಿದ್ದೇನೆ, ಮುಂದಿನ ಐದು ವರ್ಷ ಅವಧಿಯಲ್ಲಿ ತಾಲೂಕಿನಲ್ಲಿ ಹೈನುಗಾರಿಕೆಯನ್ನು ಮತ್ತಷ್ಟು ಪ್ರೋತ್ಸಾಹಿಸಿ ಕ್ಷೀರ ಕ್ರಾಂತಿಯೇ ಮಾಡಬೇಕೆಂಬ ನನ್ನ ಸಂಕಲ್ಪಕ್ಕೆ ಎಲ್ಲರೂ ಶಕ್ತಿ ತುಂಬುವಂತ ಕೆಲಸ ಮಾಡಬೇಕು, ಹಾಲು ಉತ್ಪಾದಕರ ಅಭಿವೃದ್ಧಿಯೇ ನನ್ನ ಧ್ಯೇಯ ಮತ್ತು ಗುರಿ ಎಂದರು.
ತುಮಕೂರು ಹಾಲು ಒಕ್ಕೂಟ (ಹಾಲು ಮತ್ತು ಶೇಖರಣೆ) ವ್ಯವಸ್ಥಾಪಕ ಟಿ.ವಿ.ಶ್ರೀನಿವಾಸ್ ಮಾತನಾಡಿ ಶಿರಾ ಭಾಗದಲ್ಲಿ ಹೈನುಗಾರಿಕೆಗೆ ಉತ್ತಮ ವಾತಾವರಣವಿದ್ದು, ಗುಣಮಟ್ಟದ ಹಾಲು ಡೈರಿಗೆ ಹಾಕುವ ಮೂಲಕ ಹೆಚ್ಚು ಹೆಚ್ಚು ಲಾಭವನ್ನು ರೈತರು ಪಡೆಯುವಂತಾಗಬೇಕು ಎಂದರು.
ಮೇಲ್ಕುಂಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಡಿ.ನರಸಿಂಹಮೂರ್ತಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಹೈನುಗಾರಿಕೆ ಮಾಡುವ ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡಿ ಶಕ್ತಿ ತುಂಬಿದ ಕಾರಣ ಶಿರಾ ತಾಲೂಕಿನಲ್ಲಿ ಹೈನುಗಾರಿಕೆ ಹೆಚ್ಚಾಗಲು ಕಾರಣವಾಗಿದೆ, ತಾಲೂಕಿನಲ್ಲಿ 130 ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪನೆ ಮಾಡಿ ಕ್ಷೀರಕ್ರಾಂತಿಯನ್ನೇ ಮಾಡಿದ ನಿಜವಾದ ಭಗೀರಥ ಎಸ್.ಆರ್.ಗೌಡ ಎಂದರು.
ಇದೇ ಸಂದರ್ಭದಲ್ಲಿ ನೂತನ ಸಂಘದ ಕಟ್ಟಡ ನಿರ್ಮಾಣಕ್ಕೆ 2.5 ಲಕ್ಷ ರೂಪಾಯಿಯ ಚೆಕ್ ವಿತರಣೆ ಹಾಗೂ ಹಸುಗಳ ಇನ್ಶೂರ್ಸ್ ಬಾಂಡ್ ಗಳನ್ನು ರೈತರಿಗೆ ವಿತರಣೆ ಮಾಡಲಾಯಿತು.
ಮೇಲ್ಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯೆ ಜ್ಯೋತಿ ನರಸಿಂಹಮೂರ್ತಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಮಣ್ಣ, ಮಾಜಿ ಅಧ್ಯಕ್ಷ ಹೆಚ್.ಬಿ.ಹಿಮಂತರಾಜು, ಉಪಾಧ್ಯಕ್ಷ ಕೃಷ್ಣಪ್ಪ, ತುಮುಲ್ ತಾಲೂಕು ವ್ಯವಸ್ಥಾಪಕ ಬಿ.ಗಿರೀಶ್, ವಿಸ್ತರಣಾಧಿಕಾರಿಗಳಾದ ಬಿ.ಆರ್.ಚೈತ್ರ, ಎನ್.ಕಿರಣ್ ಕುಮಾರ್, ಸಮಾಲೋಚಕ ದಯಾನಂದ, ಮುಖಂಡ ಹುಳಿಗೆರೆ ಪ್ರಸನ್ನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಸದಾಶಿವ ಗೌಡ, ಡಾ.ಶ್ರೀಕಾಂತ್ ಇತರರು ಇದ್ದರು.
Comments are closed.