ಮಧುಗಿರಿ: ಎಲ್ಲರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಜಿಪಂ, ತಾಪಂ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ಭದ್ರಪಡಿಸಲಾಗುವುದು ಎಂದು ಮಧುಗಿರಿಯ ನೂತನ ಮಂಡಲ ಅಧ್ಯಕ್ಷ ಹಾಗೂ ವಕೀಲ ಹನುಮಂತರೆಡ್ಡಿ ಕರೆ ನೀಡಿದರು.
ಭಾಜಪ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಹಾಗೂ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ನಾನು ಈ ಹಿಂದೆ ಜಿಲ್ಲಾ ಕಾನೂನು ಪ್ರಕೋಷ್ಟ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದೇನೆ, ಪಕ್ಷವು ನನಗೆ ಈಗ ಮಹತ್ತರ ಜವಾಬ್ದಾರಿ ನೀಡಿದೆ, ಮುಂದಿನ ದಿನಗಳಲ್ಲಿ ಪಕ್ಷದ ಹಿರಿಯ ಕಿರಿಯ ಕಾರ್ಯಕರ್ತರ ಮನೆಗಳ ಬಳಿ ತೆರಳಿ ಅವರನ್ನು ಭೇಟಿ ಮಾಡಿ ಭಿನ್ನಾಭಿಪ್ರಾಯ ಸರಿದೂಗಿಸಲಾಗುವುದು ಎಂದರು.
ಅಧ್ಯಕ್ಷ ಗಾದಿಯು ಮುಳ್ಳಿನ ಮೇಲೆ ನಡೆದಂತೆ ಇರುವುದು, ಹಾಗಾಗಿ ಪಕ್ಷವನ್ನು ಭದ್ರಪಡಿಸಲು ಅಗತ್ಯ ರೂಪುರೇಷೆ ರೂಪಿಸುವುದರ ಜೊತೆಗೆ ಪಕ್ಷದ ವರಿಷ್ಠರ, ಮುಖಂಡರ ಸೂಚನೆ ಮೇರೆಗೆ ಕಾರ್ಯ ನಿರ್ವಹಿಸಲಾಗುವುದು, ಯಾವುದೇ ರೀತಿಯ ಸಮಸ್ಯೆ ಎದುರಿಸಲು ನಾನು ಸಿದ್ಧನಿದ್ದೇನೆ, ನಮ್ಮ ಪಕ್ಷ ತಾಲೂಕಿನಲ್ಲಿ ತುಂಬಿರುವ ಮನೆಯಾಗಿಲ್ಲ, ಕಾರ್ಯಕರ್ತರನ್ನು ತುಂಬಿಸಿಕೊಳ್ಳುವ ಮನೆಯಾಗಬೇಕಾಗಿದೆ, ಮನೆ ಮನೆಗೂ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಕಾರ್ಯಕ್ರಮ ತಿಳಿಸಿ ಹೆಚ್ಚು ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ನಿಕಟಪೂರ್ವ ಮಂಡಲಾಧ್ಯಕ್ಷ ನಾಗೇಂದ್ರ ಮಾತನಾಡಿ ಈ ಹಿಂದಿನ ಚುನಾವಣೆಯಲ್ಲಿ 12 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯು ಜಯಶೀಲರಾದರು, ಈ ಬಹುಮತ ಬರಲು ನಾನೊಬ್ಬ ಕಾರಣನಲ್ಲ, ನಿಮ್ಮೆಲ್ಲರ ಸಹಾಯದಿಂದ ವಿ.ಸೋಮಣ್ಣನವರು ಜಯಬೇರಿ ಬಾರಿಸಿದರು, ಈ ಹಿಂದೆ ನಾನು ಬೂತ್ ಮಟ್ಟದ ಅಧ್ಯಕ್ಷ ನಾಗಿದ್ದಾಗ ಪಕ್ಷ ಗುರುತಿಸಿ ಜವಾಬ್ದಾರಿ ನೀಡಿದೆ ಹಾಗೂ ಯಾವುದೇ ಗೊಂದಲವಿಲ್ಲದೆ, ಪ್ರೀತಿಯಿಂದ ನಾನು ಹನುಮಂತರೆಡ್ಡಿ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದು ನನಗೆ ನೀಡಿದ ಸಹಕಾರವನ್ನು ನೂತನ ಅಧ್ಯಕ್ಷರಿಗೆ ನೀಡಬೇಕೆಂದರು.
ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ, ನೂತನ ಮಂಡಲಾಧ್ಯಕ್ಷ ಹನುಮಂತ ರೆಡ್ಡಿ ಅವರನ್ನು ತುಂಬಾ ಹತ್ತಿರದಿಂದ ಬಲ್ಲವನಾಗಿದ್ದು, ಅವರು ರೈತರ ಕ್ಲಿಷ್ಟ ಕರ ಹಾಗೂ ಜ್ವಲಂತ ಸಮಸ್ಯೆಗಳ ಬಗ್ಗೆ ಮೊದಲಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದಾರೆ, ಪಕ್ಷದ ಅಡಿಯಲ್ಲಿ ಎಲ್ಲರನ್ನು ಒಂದೂಗೂಡಿಸಿಕೊಂಡು ಹೋಗುವಂತಹ ಸಾಮರ್ಥ್ಯ ಬೆಳೆಸಿಕೊಂಡು ಹೋಗಲಿ ಎಂದರು.
ಮುಖಂಡರಾದ ಪಾಂಡುರಂಗಾ ರೆಡ್ಡಿ, ಮೋಹನ್, ಸುರೇಶ್, ಮಂಜುನಾಥ್, ಲತಾ ಪ್ರದೀಪ್ ಹಾಗೂ ಭಾಜಪ ಕಾರ್ಯಕರ್ತರು ಇದ್ದರು.
Comments are closed.