ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

2

Get real time updates directly on you device, subscribe now.


ಗುಬ್ಬಿ: ಪಟ್ಟಣದ ಇತಿಹಾಸ ಪ್ರಸಿದ್ಧ ಗೋಸಲ ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಸುವ ಬಗ್ಗೆ ಉಪ ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ ಹಾಗೂ ತಹಶೀಲ್ದಾರ್ ಆರತಿ.ಬಿ. ನೇತೃತ್ವದಲ್ಲಿ ಸಭೆ ನಡೆಸಿ ಚರ್ಚೆ ಮಾಡಲಾಯಿತು.
ಮಾ.05 ರಂದು ಪ್ರಾರಂಭವಾಗಲಿರುವ ಜಾತ್ರೆ ಮಾರ್ಚ್ 23 ರಂದು ಸಂಪನ್ನ ಗೊಳ್ಳುವುದು, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಯಾವುದೇ ಕುಂದು ಕೊರತೆ ಇಲ್ಲದೆ ಜಾತ್ರೆ ನಡೆಸುವ ಉದ್ದೇಶದಿಂದ 18 ಕೋಮಿನ ಮುಖಂಡರು, ಭಕ್ತಾದಿಗಳು ಹಾಗೂ ಮುಜರಾಯಿ ಇಲಾಖೆಯವರ ಸಮಕ್ಷಮದಲ್ಲಿ ಸಭೆ ಏರ್ಪಡಿಸಲಾಗಿತ್ತು.

ಮಾರ್ಚ್ 5 ರಂದು ಧ್ವಜಾರೋಹಣದೊಂದಿಗೆ ಜಾತ್ರೆ ಪ್ರಾರಂಭವಾಗಲಿದ್ದು, 9 ರಂದು ಮಹಾ ರಥೋತ್ಸವ 14 ರಂದು ಬೆಳ್ಳಿಪಲ್ಲಕ್ಕಿ ಉತ್ಸವ ಹಾಗೂ 23ರಂದು ಚನ್ನಶೆಟ್ಟಿಹಳ್ಳಿ ಗದ್ದುಗೆಗೆ ಶ್ರೀ ಸ್ವಾಮಿಯವರ ಉತ್ಸವದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಗೌರವ ಕುಮಾರ್ ಶೆಟ್ಟಿ ಮಾತನಾಡಿ, ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದರೂ ಎಲ್ಲಾ ಕಾರ್ಯಕ್ರಮಗಳು ಭಕ್ತಾದಿಗಳ ಅಪೇಕ್ಷೆಯಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಬೇಕಾಗಿದೆ, ಜಾತ್ರಾ ಮಹೋತ್ಸವದ ಅಂಗವಾಗಿ ಸಂಬಂಧಿಸಿದ ಎಲ್ಲಾ ಇಲಾಖೆಯ ಮುಖ್ಯಸ್ಥರು ಅವರ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕಾಗಿದೆ, ಜಾತ್ರಾ ಮಹೋತ್ಸವ ನಡೆಸುವ ಬಗ್ಗೆ ಯಾವುದೇ ಬದಲಾವಣೆ ಇದ್ದಲ್ಲಿ ಸಮಿತಿಯ ಗಮನಕ್ಕೆ ತಂದಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಆರತಿ.ಬಿ. ಮಾತನಾಡಿ ಜಾತ್ರಾ ಮಹೋತ್ಸವ ನಡೆಸಲು ಪಟ್ಟಣದ ಎಲ್ಲಾ ಕೋಮುಗಳು ಸಹಕಾರ ನೀಡುತ್ತ ಬಂದಿವೆ, ಈ ಬಾರಿಯೂ ಉತ್ತಮ ಸಹಕಾರ ನಿರೀಕ್ಷಿಸಿದ್ದೇವೆ, ಜಾತ್ರೆಯ ಎಲ್ಲಾ ಕಾರ್ಯಕ್ರಮ ಭಕ್ತಾದಿಗಳ ಹಾಗೂ ಮುಖಂಡರ ನೇತೃತ್ವದಲ್ಲಿಯೇ ನಡೆಯಲಿವೆ, ಯಾವುದೇ ಗೊಂದಲಕ್ಕೆ ಆಸ್ಪದ ಕೊಡದೆ ಹಾಗೂ ಸಂಪ್ರದಾಯಕ್ಕೆ ಧಕ್ಕೆ ಆಗದಂತೆ ಜಾತ್ರೆ ನಡೆಸಲು ಎಲ್ಲರೂ ಸಹಕಾರ ನೀಡುವಂತೆ ಕೋರಿದರು.

ಈ ಸಭೆಯಲ್ಲಿ 18 ಕೋಮಿನ ಮುಖಂಡರು, ಪಟೇಲ್ ಕೆಂಪೇಗೌಡರು, ಪಪಂ ಅಧ್ಯಕ್ಷೆ ಮಂಗಳಮ್ಮ, ಮುಖ್ಯಾಧಿಕಾರಿ ಮಂಜುಳಾದೇವಿ, ಯಜಮಾನ್ ಕುಮಾರ್, ಪಣೆಗಾರ್ ಸೋಮಶೇಖರ್, ಪೇಶ್ಕಾರ್ ಹಾಗೂ ಕಂದಾಯ ನಿರೀಕ್ಷಕ ಎಸ್.ಕುಮಾರ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಣ್ಣ, ದಾಸೋಹ ಸಮಿತಿಯ ಸುರೇಶ್, ಸಿಬ್ಬಂದಿ, ಮುಖಂಡರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!