ಕುಣಿಗಲ್: ಎರಡು ದಶಕಗಳ ನಂತರ ಕೆರೆಯಲ್ಲಿ ನೀರು ತುಂಬಿದ್ದು, ಕೆರೆಯ ನೀರನ್ನು ಆಶ್ರಯಿಸಿ ಗದ್ದೆ ಮಾಡಿ ಭತ್ತ ಬೆಳೆಯುವ ಕನಸು ಕಂಡಿದ್ದ ಹಲವಾರು ರೈತ ಕುಟುಂಬಗಳು ಕೆರೆ ಏರಿ ಮಾಳ ಬಿದ್ದು ನೀರು ಪೋಲಾಗುತ್ತಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಕುಣಿಗಲ್ ತಾಲೂಕಿನ ಕಸಬಾ ಹೋಬಳಿಯ ಬೇಗೂರು ಕೆರೆ 400 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದೆ, ಶಾಸಕ ಡಾ.ರಂಗನಾಥ್ ಪರಿಶ್ರಮದಿಂದಾಗಿ ಹೇಮಾವತಿ ನೀರು ಬೇಗೂರು ಕೆರೆಗೆ ಹರಿದು, ಬೇಗೂರು ಕೆರೆ ತುಂಬಿ ಕೋಡಿಯಾಗಿದೆ. ಕೆರೆ ತುಂಬಿದ್ದರಿಂದ ಕೆರೆಯ ಅಚ್ಚುಕಟ್ಟು ಪ್ರದೇಶದ ಸುಮಾರು 100 ಎಕರೆ ಪ್ರದೇಶದಲ್ಲಿ ಎರಡು ದಶಕಗಳ ನಂತರ ಭತ್ತ ಬೆಳೆಯಲು ರೈತರು ಸಿದ್ಧತೆ ನಡೆಸಿ, ಹಗಲು ರಾತ್ರಿ ಎನ್ನದೆ ತಮ್ಮ ಜಮೀನನ್ನು ಹದ ಮಾಡಿಕೊಂಡಿದ್ದರು, ಆದರೆ ಕಳೆದ ಎರಡು ದಿನಗಳಿಂದ ಬೇಗೂರು ಕೆರೆ ಏರಿಯಲ್ಲಿ ಮಾಳ ಕಂಡು ಬಂದಿದ್ದು, ಈ ಮೂಲಕ ನೀರು ಹರಿದು ಹೋಗುತ್ತಿದೆ.
ಸಂಬಂಧ ಪಟ್ಟ ಹೇಮಾವತಿ ನಾಲಾ ವಲಯದ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಸ್ವಲ್ಪ ಮಣ್ಣು ಮುಚ್ಚಿ ಹೋದವರು ಇತ್ತ ತಲೆ ಹಾಕಿಲ್ಲ ಎಂದು ರೈತರ ಪ್ರಕಾಶ್ ಇತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲು ಸಣ್ಣ ಪ್ರಮಾಣದಲ್ಲಿ ಕೆರೆ ಏರಿ ಮಾಳದಿಂದ ನೀರು ಹರಿಯುತ್ತಿದ್ದು ಇದೀಗ ನೀರು ಹರಿವಿನ ಪ್ರಮಾಣ ಹೆಚ್ಚಾಗಿದೆ, ಯಾವುದೇ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಇಲಾಖೆ ಅಧಿಕಾರಿಗಳು ತಾಲೂಕು ಆಡಳಿತ ಎಚ್ಚೆತ್ತು, ಕೆರೆಯ ಏರಿಯಿಂದ ಪೋಲಾಗುತ್ತಿರುವ ನೀರನ್ನು ನಿಯಂತ್ರಿಸಿ ಕೆರೆ ರಕ್ಷಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.
Comments are closed.