ಕೊರಟಗೆರೆ: ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ರಥಸಪ್ತಮಿ ಅಂಗವಾಗಿ ನಡೆದ ಹಲವು ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಡುವೆ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಇತಿಹಾಸವುಳ್ಳ ಹನುಮ, ಭೀಮ, ಮಧ್ವ ಮೂರು ಅವತಾರದಲ್ಲಿ ನೆಲೆಸಿರುವ ಶ್ರೀಆಂಜನೇಯ ಸ್ವಾಮಿಗೆ ಪ್ರತಿ ವರ್ಷದಂತೆ ಈ ವರ್ಷವು ಸಹರಥಸಪ್ತಮಿ ದಿನದಂದು ಮಂಜಾನೆಯಿಂದಲೇ ಹಲವಾರು ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿದ್ದು, ಮಧ್ಯಾಹ್ನ 1.30ಕ್ಕೆ ಗರುಡ ಪಕ್ಷಿಯು ಬ್ರಹ್ಮರಥೋತ್ಸವ ಸುತ್ತಲು ಮೂರು ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.
ಧಾರ್ಮಿಕ ಪೂಜಾ ಕಾರ್ಯಕ್ರಮ: ರಥಸಪ್ತಮಿ ಮುಂಜಾನೆಯಂದು ಆಂಜನೇಯ ಸ್ವಾಮಿಗೆ ನಿರ್ಮಾಲಯ, ಪಂಚಾಮೃತ ಅಭಿಷೇಕ, ಸ್ವಾಮಿ ಪ್ರತಿಮೆಗೆ ವಿಶೇಷ ಹೂವಿನ ಅಲಂಕಾರ, ಅಭಿಜಿತ್ ಲಗ್ನದಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರು
ಪ್ರತಿ ವರ್ಷದಂತೆ ಈ ವರ್ಷವು ಸಹ ರಥಸಪ್ತಮಿ ದಿನದಂದು ನಡೆಯುವ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದ್ದು, ಇಲ್ಲಿನ ದೇವಾಲಯದ ಜೀಣೋದ್ಧಾರ ಸಮಿತಿಯು ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿ, ಭಕ್ತವೃಂದಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಶೋಕ್, ತಹಶೀಲ್ದಾರ್ ಕೆ.ಮಂಜುನಾಥ್, ಸಿಪಿಐ ಅನಿಲ್, ಪಿಎಸ್ಐ ಚೇತನ್ ಕುಮಾರ್ ಸೇರಿದಂತೆ ದೇವಾಲಯದ ಜೀಣೋದ್ಧಾರ ಸಮಿತಿಯ ಪ್ರಮುಖರು ಹಾಜರಿದ್ದರು.
Comments are closed.