ಕುಣಿಗಲ್: ತಾಲೂಕಿನ ಯಡಿಯೂರಿನ ದಾಸೋಹ ಸಮಿತಿಯಲ್ಲಿ ಕೆಲಸ ಮಾಡುವ 19 ಕಡು ಬಡವ ಕುಟುಂಬದವರಿಗೆ 1.22 ಕೋಟಿ ರೂ. ಸಿಎಸ್ಆರ್ ನಿಧಿಯಡಿಯಲ್ಲಿ 19 ಸುಸಜ್ಜಿತ ಮನೆ ನಿರ್ಮಿಸಿ ವೀನರ್ ಬರ್ಗರ್ ಕಂಪನಿಯ ಪ್ರಮುಖರು ಬುಧವಾರ ಹಸ್ತಾಂತರಿಸಿದರು.
ಹಸ್ತಾಂತರ ಕಾರ್ಯಕ್ರಮದನಂತರ ಕಾರ್ಖಾನೆಯಲ್ಲಿ ಮಾತನಾಡಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೊನ್ನಂಡಅಪ್ಪಯ್ಯ, ತಾಲೂಕಿನ ಅಂಚೆಪಾಳ್ಯದಲ್ಲಿ 2009ರಲ್ಲಿ ಆರಂಭವಾದ ಕಂಪನಿಯು, ಪರಿಸರ ಸ್ನೇಹಿ, ಯಾವುದೇ ಕೃತಕ ರಸಾಯನಿಕ ಬಳಸದೆ ನೈಸರ್ಗಿಕವಾಗಿ ಅಂತಾ ರಾಷ್ಟ್ರೀಯ ಗುಣಮಟ್ಟದ ಅತಿ ಹಗುರ ಹಾಗೂ ಗಟ್ಟಿಮುಟ್ಟಾದ ಇಟ್ಟಿಗೆ ತಯಾರಿಸುತ್ತಿದೆ, ಇಡೀ ದಕ್ಷಿಣ ಏಷಿಯಾಗೆ ಅತಿದೊಡ್ಡ ಇಟ್ಟಿಗೆ ತಯಾರಿಕೆ ಕಾರ್ಖಾನೆಯಾಗಿ ಹೊರಹೊಮ್ಮಿದ್ದು, ಮೊದಲು ಬಹುಮಹಡಿ ನಿರ್ಮಾಣ ಕಂಪನಿಯರು ಹೆಚ್ಚಾಗಿ ಬಳಸುತ್ತಿದ್ದ ಈ ಇಟ್ಟಿಗೆ ಇದೀಗ ಜನ ಸಾಮಾನ್ಯರು ಸಹ ಹೆಚ್ಚಿನದಾಗಿ ಬಳಸಲು ಮುಂದಾಗಿದ್ದಾರೆ. ಇದರಿಂದ ಮನೆ ನಿರ್ಮಾಣ ವೆಚ್ಚದಲ್ಲೂ ಸಾಕಷ್ಟು ಉಳಿತಾಯವಾಗುವ ಜೊತೆಯಲ್ಲಿ ಪರಿಸರ ಸ್ನೇಹಿ ಮನೆ ನಿರ್ಮಾಣವಾಗುತ್ತದೆ, ಇಟ್ಟಿಗೆ ನಿರ್ಮಾಣಕ್ಕೆ ಕೆರೆಯ ಜೇಡಿಮಣ್ಣು ಕಚ್ಛಾ ವಸ್ತುವಾಗಿ ಬಳಸಲಾಗುತ್ತಿದೆ, ಕೆರೆಗಳಲ್ಲಿ ವೈಜ್ಞಾನಿಕವಾಗಿ ಜೇಡಿಮಣ್ಣು ಎತ್ತುವಳಿ ಮಾಡುವ ಮೂಲಕ ಕೆರೆಯ ಜಲಸಂಗ್ರಹ ಸಾಮರ್ಥ್ಯ ಹೆಚ್ಚಾಗಿ ಪರಿಸರ ಸಂರಕ್ಷಣೆಗೂ ಒತ್ತು ನೀಡುತ್ತಿದೆ.
ಮನೆ ಫಲಾನುಭವಿಯಾದ ಪುಷ್ಪಾವತಿ ಪಂಪೇಗೌಡ ಮಾತನಾಡಿ, 2019ರಲ್ಲಿ 19 ಮಂದಿ ಸೇರಿ ನಿವೇಶನ ಖರೀಸಿದ್ದು, ಮನೆ ನಿರ್ಮಾಣಕ್ಕೆ ಹಣಕಾಸು ಇಲ್ಲದೆ ಪರದಾಡುವಂತಾಗಿತ್ತು, ಕಂಪನಿಯವರು ಸುಸಜ್ಜಿತ ಮನೆ ನಿರ್ಮಿಸಿಕೊಟ್ಟಿದ್ದಾರೆ, ಕಡು ಬಡವರಾದ ನಮಗೆ ಮನೆ ನಿರ್ಮಾಣ ಕನಸಿನ ಮಾತಾಗಿತ್ತು ಎಂದು ಕಂಪನಿಯ ಕ್ರಮಕ್ಕೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಕಂಪನಿ ಹೆಚ್ ಆರ್ ಹೇಮಂತ್, ಮನೆ ನಿರ್ಮಾಣದ ಉಸ್ತುವಾರಿ ಶಿವಾನಂದ ಇತರರು ಇದ್ದರು.
Comments are closed.