ಕುಣಿಗಲ್: ವಿದ್ಯಾರ್ಥಿಗಳು ಹೆಚ್ಚಾಗಿ ಮೊಬೈಲ್ ಗೀಳಿಗೆ ಒಳಗಾಗಬಾರದು ಹಾಗೂ ಮೊಬೈಲ್ ನಲ್ಲಿ ಬರುವ ಅಪರಿಚಿತ ಸಂದೇಶಗಳ ಬಗ್ಗೆ ಎಚ್ಚರ ವಹಿಸಬೇಕೆಂದು ಪಿಎಸ್ ಐ ಕೃಷ್ಣಕುಮಾರ್ ಹೇಳಿದರು.
ಪಟ್ಟಣದ ಜ್ಞಾನ ಸಂಪದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಠಾಣೆ ಕಾರ್ಯ ವೈಖರಿಯ ಮಾಹಿತಿ ಪಡೆದರು, ಈ ವೇಳೆ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ನೀಡಿದ ಕೃಷ್ಣಕುಮಾರ್, ವಿದ್ಯಾರ್ಥಿಗಳು ಪ್ರಾಪ್ತ ವಯಸ್ಸು ಆಗುವವರೆಗೂ ಸೂಕ್ತ ಪರವಾನಿಗೆ ಪಡೆದು ವಾಹನ ಚಲಾವಣೆ ಮಾಡಬೇಕು, 18 ವರ್ಷ ತುಂಬಿದ ನಂತರ ವಾಹನ ಚಾಲನೆ ಪರವಾನಗಿ ಪಡೆದು ವಾಹನಗಳನ್ನು ಚಲಾಯಿಸಬಹುದು, ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಿದಾಗ ಅವರ ಪೋಷಕರ ಮೇಲೂ ಹಾಗೂ ವಾಹನ ಮಾಲೀಕರ ಮೇಲೆಯೂ ಕ್ರಮ ಜರುಗಿಸಲಾಗುತ್ತದೆ, ಈ ಬಗ್ಗೆ ಕಾನೂನಿನ ಅರಿವು ಇರಬೇಕು, ರಸ್ತೆಯಲ್ಲಿ ಸಂಚರಿಸುವಾಗ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಣ ಹೂಡಿಕೆ ಸೇರಿದಂತೆ ಇತರೆ ರೀತಿಯ ಜಾಹೀರಾತು ನಂಬಿ ಹಣ ಹೂಡಿಕೆ ಮಾಡಿ ಮೋಸ ಹೋಗುವ ಪ್ರಕರಣಗಳು ಹೆಚ್ಚಾಗುತ್ತಿವೆ, ಇಂತಹ ಘಟನೆಗಳು ನಡೆಯದಂತೆ ಯುವ ವಿದ್ಯಾರ್ಥಿಗಳು ಅರಿವು ಹೊಂದಿ ತಮ್ಮ ಪೋಷಕರಲ್ಲೂ ಅರಿವು ಮೂಡಿಸಿ ಸೈಬರ್ ವಂಚನೆಯಿಂದ ಪಾರಾಗಬಹುದು ಎಂದರು.
ವಿದ್ಯಾರ್ಥಿ ದಿಸೆಯಲ್ಲಿ ಶೈಕ್ಷಣಿಕ ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರ ಮೊಬೈಲ್ ಅನ್ನು ಪೂರಕವಾಗಿ ಬಳಸಿಕೊಳ್ಳಬೇಕು, ಆದರೆ ಅವು ಶೈಕ್ಷಣಿಕ ಪ್ರಗತಿಗೆ ಮಾರಕವಾಗಬಾರದು, ದೈನಂದಿನ ಜೀವನಕ್ಕೆ ಪೂರಕವಾಗುವಂತಹ ಕೆಲ ಕನಿಷ್ಠ ಕಾನೂನುಗಳ ಬಗ್ಗೆ ಅರಿವು ಹೊಂದಬೇಕು ಎಂದರು.
ವಿದ್ಯಾರ್ಥಿಗಳು ಕೆಲವು ಕಾನೂನು ಅಂಶಗಳ ಬಗ್ಗೆ ಮಾಹಿತಿ ಪಡೆದು ಸಂವಾದ ನಡೆಸಿದರು.
Comments are closed.