ಕೊರಟಗೆರೆ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿಇವಘಡ ಸಂಭವಿಸಿ ಮನೆಯಲ್ಲಿದ್ದ ದವಸ ಧಾನ್ಯದ ಜೊತೆ ಬಂಗಾರ ಮತ್ತು ನಗದು ಹಣವು ಸುಟ್ಟು ಭಸ್ಮವಾಗಿ ರೈತ ತಿಮ್ಮಪ್ಪನಿಗೆ 8ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿರುವ ಘಟನೆ ಬುಧವಾರ ತಡ ರಾತ್ರಿ ನಡೆದಿದೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ದಿನ್ನೇಪಾಳ್ಯದ ತಿಮ್ಮಪ್ಪನ ತೋಟದ ಮನೆಯ ರೇಷ್ಮೆ ಶೆಡ್ ನಲ್ಲಿ ಆಕಸ್ಮಿಕವಾಗಿ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾಗಿ ಮನೆಗೆ ಬೆಂಕಿ ಆವರಿಸಿಕೊಂಡು ಸುಮಾರು 8 ಲಕ್ಷ ಮೌಲ್ಯದ ದವಸ ಧಾನ್ಯ ಮತ್ತು ನಗದು ಸುಟ್ಟು ಹೋಗಿದೆ.
ತಿಮ್ಮಪ್ಪನ ಮನೆಯಲ್ಲಿದ್ದ 2 ಲಕ್ಷ ನಗದು ಹಣ, 5 ಲಕ್ಷ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ, ಶೇಂಗಾ, ತೊಗರಿಬೆಳೆ, ಜೋಳ, ರಾಗಿಯ ಜೊತೆಯಲ್ಲಿ ಜಮೀನು, ಮನೆಯ ದಾಖಲೆ ಸುಟ್ಟುಹೋಗಿವೆ, ಕುಟುಂಬದ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮಕ್ಕಳ ಅಂಕಪಟ್ಟಿ ಸೇರಿದಂತೆ ವ್ಯಾಸಂಗ ಮಾಡುವ ಪುಸ್ತಕಗಳು ತಡರಾತ್ರಿಯ ಬೆಂಕಿಗೆ ಆಹುತಿ ಆಗಿವೆ.
ದಿನ್ನೇಪಾಳ್ಯದ ತಿಮ್ಮಪ್ಪ ಮಾತನಾಡಿ ತೋಟದ ಮನೆಯಲ್ಲಿ ತಡರಾತ್ರಿ ವಿದ್ಯುತ್ ಅವಘಡ ಸಂಭವಿಸಿದೆ, ನಮ್ಮ ಕುಟುಂಬದ 6 ಜನ ಹೊರಗಡೆ ಮಲಗಿದ್ದೇವೆ, ಇಲ್ಲವಾದ್ರೆ ನಮ್ಮ ಪ್ರಾಣಕ್ಕೂ ಕಂಟಕ ಆಗುತ್ತಿತ್ತು, ನಮಗೆ ಸುಮಾರು 8 ಲಕ್ಷ ಮೌಲ್ಯದ ದವಸ ಧಾನ್ಯ, ನಗದು ಮತ್ತು ಚಿನ್ನಾಭರಣ ನಾಶವಾಗಿವೆ, ದಯವಿಟ್ಟು ಸರಕಾರ ನಮಗೆ ಸಹಾಯಹಸ್ತ ನೀಡಬೇಕಿದೆ ಎಂದು ಮನವಿ ಮಾಡಿದರು.
ಬೆಸ್ಕಾಂ ಇಲಾಖೆ ಎಇಇ ನೇತೃತ್ವದ ತಂಡ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.