ತುಮಕೂರು: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಸರಬರಾಜು ಹಾಗೂ ರೈತರ ಪಂಪ್ ಸೆಟ್ಗಳಿಗೆ ತೊಂದರೆ ಆಗದಂತೆ ಗುಣಮಟ್ಟದ ವೋಲ್ಟೇಜ್ ನೊಂದಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು. ತಾಂತ್ರಿಕ ಸಮಸ್ಯೆಗಳು ಎದುರಾದರೆ ತಕ್ಷಣ ಬಗೆಹರಿಸಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ನಗರದಲ್ಲಿ ಬೆಸ್ಕಾಂ ಅಧಿಕಾರಿಗಳ ಹಾಗೂ ಗ್ರಾಮಾಂತರ ಕ್ಷೇತ್ರದ ಸಾರ್ವಜನಿಕರ ಸಭೆ ನಡೆಸಿದ ಶಾಸಕರು, ತಮ್ಮ ಗ್ರಾಮಾಂತರ ಕ್ಷೇತ್ರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ವಿಳಂಬ ಮಾಡದೇ ಬಗೆಹರಿಸಬೇಕು ಎಂದು ಎಚ್ಚರಿಕೆ ನೀಡಿದರು.
ಬೇಸಿಗೆ ಆರಂಭವಾಗಿರುವ ಕಾರಣ ಕುಡಿಯುವ ನೀರು ಪೂರೈಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ರೈತರು ಬಾವಿ, ಬೋರ್ ವೆಲ್ ಗಳಿಂದ ನೀರು ಎತ್ತಲು ವಿದ್ಯುತ್ ಅವಲಂಬಿಸಬೇಕಾಗುತ್ತದೆ, ಹೀಗಾಗಿ ವಿದ್ಯುತ್ ಕಡಿತಗೊಳಿಸದೆ ನಿಯಮಿತವಾಗಿ, ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು, ಸುಟ್ಟು ಹೋಗಿರುವ ವಿದ್ಯುತ್ ಪರಿವರ್ತಕಗಳನ್ನು ಕೂಡಲೇ ಬದಲಾಯಿಸಬೇಕು ಎಂದು ಹೇಳಿದರು.
ಅಕ್ರಮ ಸಕ್ರಮ ಯೋಜನೆಯಡಿ ಟಿಸಿ ಅಳವಡಿಕೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ, ಇದಕ್ಕೆ ಅವಕಾಶ ನೀಡದೆ ಟಿಸಿ ಅಳವಡಿಸಬೇಕು, ನಿರಂತರ ಜ್ಯೋತಿ ಯೋಜನೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು, ಅನಗತ್ಯವಾಗಿ ವಿದ್ಯುತ್ ಕಡಿತಗೊಳಿಸಿ ಸಾರ್ವಜನಿಕರಿಗೆ ತೊಂದರೆ ಮಾಡಬಾರದು, ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ, ಕಂಬಗಳನ್ನು ತಕ್ಷಣ ಬದಲಾಯಿಸಬೇಕು, ತಾಲ್ಲೂಕಿನಲ್ಲಿ ಹೊನ್ನೆನಹಳ್ಳಿ, ಸಿರಿವರ, ಹೆಬ್ಬಾಕ, ಕೋಡಿ ಮುದ್ದನಹಳ್ಳಿಯಲ್ಲಿ ಪವರ್ ಸ್ಟೇಷನ್ ಪ್ರಾರಂಭ ಮಾಡಬೇಕು ಎಂದು ಶಾಸಕ ಸುರೇಶ್ ಗೌಡರು ಅಧಿಕಾರಿಗಳಿಗೆ ತಿಳಿಸಿದರು.
ಬೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಅವರೊಂದಿಗೆ ವಿವಿಧ ಹಂತದ ಅಧಿಕಾರಿಗಳು, ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
Comments are closed.