ಕೆಲಸದಲ್ಲೂ ಕ್ರೀಡಾ ಮನೋಭಾವ ಇರಲಿ

8

Get real time updates directly on you device, subscribe now.


ಕುಣಿಗಲ್: ಕ್ರೀಡಾ ಮನೋಭಾವ ಕೆಲಸದಲ್ಲೂ ಇದ್ದಾಗ ಉತ್ತಮ ಕರ್ತವ್ಯ ನಿರ್ವಹಣೆ ಸಾಧ್ಯವಾಗಿ ಪ್ರಗತಿಗೆ ಪೂರಕವಾಗುತ್ತದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಹೇಳಿದರು.
ತಾಲೂಕಿನ ಗಿರಿಗೌಡನ ಪಾಳ್ಯದ ಖಾಸಗಿ ಕ್ರೀಡಾಂಗಣದಲ್ಲಿ ತಾಲೂಕು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರ ತಾಲೂಕುಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರೀತಿ, ವಿಶ್ವಾಸದಿಂದ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು, ಭಿನ್ನಾಭಿಪ್ರಾಯ ಇರುವ ಮನಸುಗಳು ಗುಂಪಾಗಿ ಕ್ರೀಡೆಯಲ್ಲಿ ತೊಡಗಿದಾಗ ಭಿನ್ನಾಭಿಪ್ರಾಯ ತೊಲಗಿ ಗೆಲುವು ಸಾಧಿಸಬೇಕೆಂಬ ಮನೋಭಾವದಿಂದ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ, ಇಂತಹ ಕ್ರೀಡಾಕೂಟಗಳ ಆಯೋಜನೆಯಿಂದ ಇಲಾಖಾ ನೌಕರರಲ್ಲಿ ಕ್ರಿಯಾಶೀಲತೆ, ಕರ್ತವ್ಯ ತತ್ಪರತೆ ಮೂಡಲು ಸಹಕಾರಿಯಾಗಿ ಉತ್ತಮ ಪ್ರಗತಿಗೆ ಪೂರಕವಾಗುತ್ತದೆ ಎಂದರು.

ಪ್ರಸಕ್ತಸಾಲಿನಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ 150 ಕೋಟಿ ವೆಚ್ಚದಲ್ಲಿ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯ ವೃದ್ಧಿಗೆ ಶ್ರಮಿಸಲಾಗಿದ್ದು ಎಲ್ಲರ ಸಹಕಾರದಿಂದ ಕೊನೆ ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ, ಚರಂಡಿ ಅಭಿವೃದ್ಧಿ ಕಾಮಗಾರಿಯಂತಹ ಸಮುದಾಯದ ಕೆಲಸಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು, ತಾಲೂಕು ಇಲಾಖೆಯ ಅಭಿವೃದ್ಧಿ ಕಾರ್ಯಗಳಲ್ಲಿ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ತಾಪಂ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ್, ತಾಲೂಕಿನ ಪಂಚಾಯತ್ ರಾಜ್ ಇಲಾಖೆಯಲ್ಲಿ ಎಲ್ಲಾ ಸಿಬ್ಬಂದಿ ನಡುವೆ ಉತ್ತಮ ಸಮನ್ವಯತೆ ಇದೆ, ಇಲಾಖೆಯಡಿಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ ಉತ್ತಮವಾಗಿ ಕೆಲಸ ನಿರ್ವಹಣೆ ಮಾಡಲಾಗುತ್ತಿದೆ, ಇಲಾಖೆ ಸಿಬ್ಬಂದಿ ಕಾರ್ಯಭಾರ ಒತ್ತಡ ನಿವಾರಣೆ ನಿಟ್ಟಿನಲ್ಲಿ ಕ್ರೀಡಾಕೂಟ ಕಾರ್ಯಕ್ರಮ ಸಹಕಾರಿಯಾಗಿದೆ, ಇಲಾಖೆಯ ಎಲ್ಲಾ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಣ್ಣ, ನರೇಗ ಸಹಾಯಕ ನಿರ್ದೇಶಕ ಕಾಂತರಾಜು, ಪಿಡಿಒ ಸಂಘದ ಅಧ್ಯಕ್ಷ ಚಂದ್ರಹಾಸ್, ತಾಪಂ ವ್ಯವಸ್ಥಾಪಕ ರಾಜಣ್ಣ ಸೇರಿದಂತೆ ಗ್ರಾಪಂನ ವಿವಿಧ ನೌಕರರು, ತಾಲೂಕು ಪಂಚಾಯಿತಿ ಸಿಬ್ಬಂದಿ, ನೌಕರರು ಪಾಲ್ಗೊಂಡಿದ್ದರು. ಸಿಇಒ ಪ್ರಭು ಬ್ಯಾಟಿಂಗ್ ಗೆ ಇಒ ನಾರಾಯಣ್, ಪಿಡಿಒಗಳು ಬೌಲಿಂಗ್ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು, ಸುಡುವ ಬಿಸಿಲಿನ ನಡುವೆಯೂ ಸಿಬ್ಬಂದಿ, ನೌಕರರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು, ವಿವಿಧ ಗ್ರಾಪಂ ಅಧ್ಯಕ್ಷರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!