ಕುಣಿಗಲ್: ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡುವಬಗ್ಗೆ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ಸಮರ್ಥ ದೃಷ್ಟಿ ಹೊಂದಿ ಗುರುಗಳ ಮಾರ್ಗದರ್ಶನದಲ್ಲಿ ತಮ್ಮಲ್ಲಿರುವ ನ್ಯೂನ್ಯತೆ ಸರಿಪಡಿಸಿಕೊಂಡು ಗುರಿ ಸಾಧಿಸಿ ಜೀವನ ಉತ್ತಮ ಗೊಳಿಸಿಕೊಳ್ಳಬೇಕೆಂದು ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಜ್ಞಾನ ಭಾರತಿ ಪ.ಪೂ. ಕಾಲೇಜಿನಲ್ಲಿ ಸಾಧನೆಯೆಡೆಗೆ ಹೊರಟಿರುವ ಹಿರಿಯ ವಿದ್ಯಾರ್ಥಿಗಳಿಗೆ ಕಿರಿಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಯುವ ವಿದ್ಯಾರ್ಥಿಗಳಿಗೆ ಎಲ್ಲಾ ಸವಲತ್ತುಗಳಿವೆ, ಬುದ್ಧಿವಂತಿಕೆ ಇದೆ, ಆದರೆ ಹೃದಯ ವೈಶಾಲ್ಯತೆಯ ಕೊರತೆ ಹೆಚ್ಚು ಇದೆ, ಇದು ನಿಜಕ್ಕೂ ಖೇದಕರ, ಹೃದಯ ವೈಶಾಲ್ಯತೆ ಇಲ್ಲದ ಬುದ್ಧಿವಂತನಿಂದ ಸಮಾಜಕ್ಕೆ ಯಾವ ಪ್ರಯೋಜನ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ, ತಂದೆ, ತಾಯಿಯರ ಕಷ್ಟ ನೋಡಿ ಅದಕ್ಕೆ ತಮ್ಮ ಸಾಧನೆಯೆ ಉತ್ತರ ಎಂಬಂತೆ ವಿದ್ಯಾರ್ಥಿಗಳು ಸತತ ಸಾಧನೆ ಮೂಲಕ ಉತ್ತಮ ಸ್ಥಾನಮಾನ ಗಳಿಸಿ ತಂದೆ, ತಾಯಿಯರ ಕಷ್ಟ ತೊಡೆದು ಹಾಕಬೇಕಿದೆ, ಸಮಸ್ಯೆಗಳು ಸತತವಾಗಿ ಕಾಡುತ್ತಲೆ ಇರುತ್ತವೆ, ಆದರೆ ಸಮಸ್ಯೆಗಳನ್ನು ಪರಿಣಾಮಕಾರಿ ಎದುರಿಸುವ ಕೌಶಲ್ಯ ರೂಢಿಸಿಕೊಂಡ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಾನೆ, ಜ್ಞಾನಭಾರತಿ ಪ.ಪೂ.ಕಾಲೇಜಿನ ಯಾವುದೇ ವಿದ್ಯಾರ್ಥಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದಲ್ಲಿ ಮಠದ ವತಿಯಿಂದ ಒಂದು ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗಸಂಘದ ಅಧ್ಯಕ್ಷ, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಮಾತನಾಡಿ, ದೊಡ್ಡವರನ್ನು ಕಿರಿಯರು ಸನ್ಮಾನಿಸಿ, ಗೌರವಿಸುವುದು ನಮ್ಮ ನಾಡಿನ ಸಂಸ್ಕೃತಿ, ಪರಂಪರೆಗಳಲ್ಲಿ ಒಂದಾಗಿದ್ದು ಅದರಂತೆ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುತ್ತಿದ್ದಾರೆ, ಸಂಸ್ಥೆಯು ಕೇವಲ ಶಿಕ್ಷಣ ಕಲಿಸುವುದಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡಿಸುವುದಕ್ಕೆ ಪೂರಕ ಕಾರ್ಯಕ್ರಮ ನಡೆಯುತ್ತಿದೆ, ವಿದ್ಯೆಯ ಜೊತೆ ವಿದ್ಯಾರ್ಥಿಗಳು ಸಂಸ್ಕಾರ ಕಲಿತಾಗ ಪರಿಪೂರ್ಣತೆ ಮೂಡುತ್ತದೆ ಎಂದರು.
ಒಕ್ಕಲಿಗ ಸಂಘದ ಪದಾದಿಕಾರಿಗಳಾದ ಗಿರೀಶ್, ಶಿವಣ್ಣಗೌಡ, ಚನ್ನಪ್ಪ, ಚಂದ್ರೇಗೌಡ, ಶಿವರಾಮಯ್ಯ, ಲಕ್ಷ್ಮಣಗೌಡ, ಸೀತರಾಮಯ್ಯ, ಯೋಗ ನರಸಿಂಹ, ಕೆಂಪಹೊನ್ನೇಗೌಡ, ಪ್ರಾಚಾರ್ಯ ಗೋವಿಂದೇಗೌಡ, ಡಾ.ಕಪನಿಪಾಳ್ಯರಮೇಶ, ಮುಖ್ಯೋಪಾಧ್ಯಾಯ ಕೆ.ಜಿ.ಪ್ರಕಾಶ ಮೂರ್ತಿ, ಗಂಗಮ್ಮ ಇತರರು ಇದ್ದರು. ವಿದ್ಯಾರ್ಥಿಗಳು ಕಾಲೇಜಿನ ವ್ಯವಸ್ಥೆಯ ತಪ್ಪುಒಪ್ಪುಗಳ ಅಭಿಪ್ರಾಯ ಮಂಡಿಸಿದರು.
Comments are closed.